ADVERTISEMENT

ಗ್ರಾಮಚರಿತ್ರ ಕೋಶಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಜಾನಪದ ವಿಶ್ವವಿದ್ಯಾಲಯವು ಉದ್ದೇಶಿಸಿದ `ಗ್ರಾಮ ಚರಿತ್ರ ಕೋಶ~ ಪ್ರಾಕೃತಿಕ, ಭೌತಿಕ, ಸಾಂಸ್ಕೃತಿಕ ಎಂಬ ಮೂರು ವಿಭಾಗಗಳಲ್ಲಿ ಹಳ್ಳಿಯೊಂದರ ಸಂಪೂರ್ಣ ಮಾಹಿತಿ ಒಳಗೊಳ್ಳುತ್ತದೆ.

ಹಳ್ಳಿಯ ಪ್ರಾಚೀನ ಹೆಸರಿನಿಂದ ಹಿಡಿದು ಆ ಹಳ್ಳಿಯ ಆಧುನಿಕ ಸಂಪರ್ಕಗಳೊಂದಿಗಿನ ಮಾಹಿತಿಗಳು ಈ ಕೋಶದಲ್ಲಿ ಒಳಗೊಳ್ಳುತ್ತವೆ. ಮೊದಲ ಹಂತದಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಕ್ಷೇತ್ರ ಸಹಾಯಕರನ್ನು ನಿಯೋಜಿಸಿಕೊಂಡು ಅವರಿಗೆ ಭಾಷಿಕ, ಜಾನಪದೀಯ, ಇತಿಹಾಸ, ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ತರಬೇತಿ ನೀಡಿ, ಮಾಹಿತಿ ಸಂಗ್ರಹ ನಮೂನೆ ಹಾಗೂ ಇತರೆ ಪರಿಕರಗಳೊಂದಿಗೆ ಕ್ಷೇತ್ರಕ್ಕೆ ಕಳುಹಿಸಿ ಕೊಡಲಾಗುವುದು.

ಈ ಮಾಹಿತಿ ಸಂಗ್ರಹಕಾರರು ಆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿರುವ ಅಂಕಿ ಅಂಶಗಳನ್ನು ಸಂಗ್ರಹಿಸಿ ಮತ್ತು ಲಭ್ಯ ದಾಖಲೆಗಳನ್ನು ಆಧರಿಸಿ, ವಯಸ್ಕರ ಮೌಖಿಕ ಪರಂಪರೆಯಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ.

ಸಂಗ್ರಹಿಸಿದ ಮಾಹಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ನೇಮಿಸಲಾದ ಕ್ಷೇತ್ರ ಪರಿಣತರ ಪರಿಶೀಲನೆಗೆ ಒಳಪಡಿಸಿ ನಂತರ  ಮಾಹಿತಿಗಳನ್ನು ಕೇಂದ್ರಕ್ಕೆ ತರಿಸಿಕೊಳ್ಳಲಾಗುವುದು.
ಹೀಗೆ ತಾಲ್ಲೂಕು, ಜಿಲ್ಲೆಗಳಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಜಾನಪದ, ಭಾಷೆ, ಇತಿಹಾಸ, ಶಾಸನ, ಪುರಾತತ್ವ ಮುಂತಾದ ಕ್ಷೇತ್ರಗಳ ಪರಿಣತರಿಂದ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಿ, ಅನಂತರ ಜಿಲ್ಲಾವಾರು ಕ್ರೋಢೀಕರಿಸಿ, ದಾಖಲಿಸಲಾಗುತ್ತದೆ.

ನಾಡಿನ ದೇಸಿ ಪರಿಸರವನ್ನು ಅದರ ಮೂಲ ಆಕರಗಳೊಂದಿಗೆ ಸಂಗ್ರಹಿಸಿ, ದಾಖಲಿಸಿ, ಸಂರಕ್ಷಿಸಿ, ಅಧ್ಯಯನಕ್ಕೆ ಒಳಪಡಿಸುವುದೇ `ಗ್ರಾಮ ಚರಿತ್ರ ಕೋಶ~ದ ಉದ್ದೇಶ. ನಮ್ಮ ಹಳ್ಳಿಗಳು ಜನ ಸಂಸ್ಕೃತಿಯ ವೈವಿಧ್ಯಪೂರ್ಣ ಜೀವಘಟಕಗಳು ಎಂಬ ನಂಬುಗೆಯಿಂದ ಈ ಮಾಹಿತಿ ಸಂಗ್ರಹಕ್ಕೆ ಕೈಹಾಕಲಾಗಿದೆ.

ಹೀಗಾಗಿ ಈ ಜೀವ ದ್ರವ್ಯಗಳ ಮೂಲಧಾತುಗಳಾಗಿರುವ ಶ್ರಮಿಕ ಜನ ವರ್ಗಗಳನ್ನು ಆಶ್ರಯಿಸಬೇಕೆಂಬ ಅರಿವು ನಮಗೆ ನಿಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿಯೇ ಮಾಹಿತಿ ಸಂಗ್ರಹಕ್ಕೆ  ಸ್ಥಳೀಯ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗುವುದು. ಜಿಲ್ಲಾ ಹಂತದ ಹಾಗೂ ಕೇಂದ್ರ ಮಟ್ಟದಲ್ಲಿ ಪರಿಣತರನ್ನಾಗಿ ಬಹುವಿಷಯ ತಿಳಿದವರನ್ನೇ ಕೇಳಿಕೊಳ್ಳಲಾಗುವುದು.

ಆದ್ದರಿಂದ ಡಾ. ಲಿಂಗದಹಳ್ಳಿ ಹಾಲಪ್ಪ ಅವರು ಎತ್ತಿರುವ ಅನುಮಾನ,ಆತಂಕಗಳಿಗೆ ಕಾರಣವಿಲ್ಲ (ಸಂಗತ, ಫೆ.8). ಉದ್ದೇಶಿತ ಕೋಶವು ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಮತ್ತು ಆಧುನಿಕ ವಿವರಗಳು ಒಳಗೊಂಡ ಮಾಹಿತಿ ಕೋಶವೇ ಹೊರತು ಸಿದ್ಧ ಮಾದರಿಯನ್ನು ಇರಿಸಿಕೊಂಡು ರಚಿಸುವ ಇತಿಹಾಸದ ಮರು ಕಟ್ಟುವಿಕೆಯಾಗಲೀ ಅಥವಾ ಹೊಸ ಇತಿಹಾಸ ರಚನೆಯ ಸಂಪುಟವಾಗಲೀ ಅಲ್ಲ.

ಈ ಕೆಲಸ ವ್ಯಾಪಕ, ವಸ್ತುನಿಷ್ಠ ಮತ್ತು ಪಾರದರ್ಶಕವಾಗಿ ನಡೆಯುತ್ತದೆ. ಸಮಾಜದ ಮೌಲ್ಯಗಳ ಬಗ್ಗೆ ಕಾಳಜಿ ಇರುವ ಎಲ್ಲರ ಸಹಕಾರವು ಈ ಕಾರ್ಯಕ್ಕೆ ಲಭ್ಯವಾಗಬೇಕೆಂಬ ನೆಲೆಯಲ್ಲಿಯೇ ಈ ಯೋಜನೆಯನ್ನು ಜಾನಪದ ವಿಶ್ವವಿದ್ಯಾನಿಲಯವು ಕೈಗೆತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.