ADVERTISEMENT

ಘನತೆ ಉಳಿಸಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST

‘ಈ ಸಲ ಚುನಾವಣೆ ಒಂದಲ್ಲ, 224 ಎಂದೂ ಯಾವ ಪಕ್ಷವಾದರೂ ಗೆಲ್ಲಲಿ ಅದು ಮೇಲಿನಿಂದ ಕೆಳಗೆ ಹರಿದುಬಂದ ಗೆಲುವಾಗಿರುವುದಿಲ್ಲ’ ಎಂದು ನಾರಾಯಣ ಎ. ಅವರು  ಬರೆದದ್ದು (ಪ್ರ.ವಾ., ಮೇ 8) ನಿಜವಾಗಿದೆ.

ಸದ್ಯ ಯಾವ ಪಕ್ಷವೂ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾಬಲ ಹೊಂದಿಲ್ಲ (ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38). ಯಾವ ಪಕ್ಷದ ನಾಯಕನೂ ಗೆದ್ದ ದೊಡ್ಡಸ್ಥಿಕೆಯಿಂದ ಮೆರೆಯುವಂತಿಲ್ಲ. ಹಾಗೇ ಯಾವ ಪಕ್ಷದ ನಾಯಕನ ವರ್ಚಸ್ಸಿನ ಹಂಗೂ ಅಲೆಯೂ ಇಲ್ಲದೆ ಪ್ರತಿಯೊಬ್ಬ ಶಾಸಕನೂ ತನ್ನ ಸ್ವಸಾಮರ್ಥ್ಯದಿಂದಲೇ ಆರಿಸಿ ಬಂದಿದ್ದಾನೆಂದರೆ ಉತ್ಪ್ರೇಕ್ಷೆಯಲ್ಲ. ನಮ್ಮ ಜನತಾಪ್ರಜ್ಞೆ ಅಭ್ಯರ್ಥಿಯ ಸಾಮರ್ಥ್ಯವನ್ನು ನೋಡಿ ಬೆಂಬಲಿಸಿದೆ.

ಪ್ರಸ್ತುತ ನಮ್ಮ ಶಾಸಕರು ಈ ಪ್ರಜಾತೀರ್ಪಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಬಹುಮತ ಸಾಧಿಸಲು ಹೊರಟ ಯಾವ ಪಕ್ಷವೇ ಆಗಲಿ ಕೈಗೊಳ್ಳುವ ಅಪವಿತ್ರ, ಭ್ರಷ್ಟ ಮಾರ್ಗಕ್ಕೆ ಹೊರಳಿಕೊಳ್ಳಬಾರದು. ಆಮಿಷಕ್ಕೆ ಒಳಗಾಗಿ, ಅವರಿಂದ ಕಡಿವಾಣ ಹಾಕಿಸಿಕೊಳ್ಳದೆ ತಮ್ಮ ಘನತೆ, ಗೌರವ ಕಾಪಾಡಿಕೊಳ್ಳಬೇಕು.

ADVERTISEMENT

‘ಆಪರೇಷನ್’ ಹೆಸರಿನ ಹುಚ್ಚು ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರು ಸಹ ಅವಕಾಶ ಕೊಡಬಾರದು. ತಮ್ಮ ನಿಷ್ಪಕ್ಷಪಾತ ನ್ಯಾಯ ಪ್ರಜ್ಞೆಯನ್ನು ಪ್ರದರ್ಶಿಸಬೇಕು. ಈ ಮೂಲಕ ಅವರು ಪ್ರಜ್ಞಾವಂತ ಕರ್ನಾಟಕ ಜನರ ಗೌರವಾದರಗಳಿಗೆ ಪಾತ್ರರಾಗಬೇಕು.

ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.