ADVERTISEMENT

ಚುನಾವಣೆಯೇ ಮುಹೂರ್ತ

ಸಾಮಗ ದತ್ತಾತ್ರಿ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST

‘ಕೇಂದ್ರವು ಕಾಂಗ್ರೆಸ್ ಮುಖಂಡರನ್ನೇ ಗುರಿಯಾಗಿಸಿಕೊಂಡು ಐ.ಟಿ. ದಾಳಿ ನಡೆಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಉದ್ದೇಶಪೂರ್ವಕ ದಾಳಿ ನಡೆಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಟೀಕೆಗೆ ಪ್ರತ್ಯುತ್ತರ ನೀಡಿರುವ ಪ್ರಧಾನ ಮುಖ್ಯ ತೆರಿಗೆ ಕಮಿಷನರ್, ‘ಆದಾಯ ತೆರಿಗೆ ದಾಳಿಯು ರಾಜಕೀಯ ಪ್ರೇರಿತವೆಂದು ಆರೋಪಿಸುವವರು ತಾಕತ್ತಿದ್ದರೆ ಇಲಾಖೆಯ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿ’ ಎಂದು ಸವಾಲೆಸೆದಿದ್ದಾರೆ (ಪ್ರ.ವಾ., ಮಾ 23).

ಕಾಂಗ್ರೆಸ್‌ನವರು ಮಾ. 22 ರಂದು ಆದಾಯ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕಲು ದೊಡ್ಡ ಜಾಥಾ ಏರ್ಪಡಿಸಿದ್ದರು. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಅಂದು ಸಚಿವ ಡಿ.ಕೆ. ಶಿವಕುಮಾರ್‌ ಅವರ ಪ್ರಕರಣ ವಿಚಾರಣೆಗೆ ಬಂದಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಇದರಿಂದ ಯಾರು ಯಾರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎನ್ನುವುದು ತಾನಾಗಿಯೇ ಸ್ಪಷ್ಟವಾಗುವುದಲ್ಲವೇ?

ವ್ಯವಹಾರಗಳೆಲ್ಲ ಪಾರದರ್ಶಕವಾಗಿದ್ದು, ಕ್ರಮವಾಗಿ ತೆರಿಗೆ ಪಾವತಿಸುವವರು ಐ.ಟಿ. ದಾಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಲಾಖೆಯ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ದಾಳಿಗೊಳಗಾದ ವ್ಯಕ್ತಿಗೆ ಇದ್ದೇ ಇದೆ. ಒಂದು ದಾಳಿ ನಡೆಸಬೇಕಾದರೆ ಹಲವು ತಿಂಗಳ ಪೂರ್ವತಯಾರಿ ಬೇಕಾಗುತ್ತದೆ. ಆದ್ದರಿಂದ ದಾಳಿಗಳು ಯಾರದೋ ಲಹರಿಗಾಗಿ ಕೈಗೊಳ್ಳುವ ತಮಾಷೆಗಳಲ್ಲ. ತುರ್ತು ಪರಿಸ್ಥಿತಿಯಲ್ಲಿ ಇಂಥ ದಾಳಿಗಳು ನಡೆದಿದ್ದವು. ಕೆಲವು ಅಧಿಕಾರಿಗಳು ಬೆಲೆ ತೆತ್ತರು. ರಾಜಕಾರಣಿಗಳು?... ನಿರುಮ್ಮಳ!

ADVERTISEMENT

ಇನ್ನೊಂದು ಮುಖ್ಯ ವಿಷಯ: ನಮ್ಮಲ್ಲಿ ಚುನಾವಣೆ ಬಂತೆಂದರೆ ಹಣದ ಹೊಳೆ ಹರಿಯುತ್ತದೆ. ಈಗಾಗಲೇ ವರದಿಯಾಗಿದೆಯಲ್ಲ ‘ಉಡುಗೊರೆಗಳ ಕೊಡುಗೆಯ ಸಂಭ್ರಮ!’ ಈ ಸಮಯದಲ್ಲಿ ಕಪ್ಪುಹಣದ ಪ್ರಸರಣ ಇರುತ್ತದೆ ಎನ್ನುವುದು ಸತ್ಯಸ್ಯಸತ್ಯ. ಎಂದೇ, ತೆರಿಗೆ ದಾಳಿಗಳು ಪ್ರಸ್ತುತವಾಗುವುದು ಮತ್ತು ಅವು ತಪ್ಪದೇ ನಡೆಯಬೇಕಾದವು. ರಾಜಕೀಯ ಪಕ್ಷಗಳು ಆಕ್ಷೇಪಿಸುತ್ತವೆ ಎಂದು ದಾಳಿ ಕೈಬಿಡುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.