ADVERTISEMENT

ಜ್ಞಾನಪೀಠ ಸಂಭ್ರಮ ಹೆಚ್ಚಿಸಿದವರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ದೊರೆತಿರುವ ಸಂದರ್ಭದಲ್ಲಿ ಚಂದ್ರಶೇಖರ ಕಂಬಾರರನ್ನು ಅಭಿನಂದಿಸುವಾಗಲೇ ಈ ಸಂತೋಷದ ಸಂಭ್ರಮಕ್ಕೆ ಕಾರಣವಾದ ಇನ್ನೆರಡು ಹೆಸರುಗಳನ್ನೂ ನಾವು ಸ್ಮರಿಸಿಕೊಳ್ಳಬೇಕು.  

ಮೊದಲನೆಯದು ಬಿ.ವಿ. ಕಾರಂತರದು. ಅವರು ನನ್ನ `ತುಘಲಕ್~ ನಾಟಕವನ್ನು ಭಾಷಾಂತರಿಸಿ ಉರ್ದುವಿಗೆ ಒಯ್ದಿದ್ದರ ಪರಿಣಾಮವಾಗಿ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ ಅದನ್ನು ರಂಗಭೂಮಿಗೆ ತಂದಿತು.

ಆ ಪ್ರಯೋಗದ ಫಲವಾಗಿ ಕರ್ನಾಟಕದ ಹೊರಗಿದ್ದವರಿಗೂ-ಆ ಯುಗದಲ್ಲಿ ಅತಿ  ದೂರದಲ್ಲಿದ್ದ ವಿಶ್ವ ಅದು- ನನ್ನ ನಾಟಕಗಳ ಪರಿಚಯವಾಯಿತು. 1971ರ ವರೆಗೆ  ಕನ್ನಡ ಸಾಹಿತ್ಯದ ಕೆಲವು ಪರಿಮಿತ ಗುಂಪುಗಳಲ್ಲಿ ಮಾತ್ರ  ಕವಿಗಳೆಂದು ಪರಿಚಿತರಾಗಿದ್ದ ಕಂಬಾರರು ಬಯಲು ರಂಗಭೂಮಿಯಲ್ಲಿ ಕಾರಂತರು ನಿರ್ದೇಶಿಸಿದ `ಜೋಕುಮಾರಸ್ವಾಮಿ~ಯಿಂದಾಗಿ ದಿಢೀರನೆ ಕಣ್ಣು ಉಕ್ಕಿಸುವ ಪ್ರತಿಭೆಯ ನಾಟಕಕಾರರೆಂದು ಮನ್ನಣೆ ಪಡೆದರು (ಆ ಪ್ರಯೋಗದಲ್ಲಿ ಗೌಡನ ಪಾತ್ರ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು). 

ಮುಂದೆ ಆ ನಾಟಕ ಹಿಂದಿಯಲ್ಲಿ ಮುಂಬೈ, ದಿಲ್ಲಿಗಳಲ್ಲೂ ಪ್ರಯೋಗ ಕಂಡಿತು. ಕಾರಂತರಿಲ್ಲದಿದ್ದರೆ ನಾವಿಬ್ಬರೂ ಯಾವ ಮೂಲೆಯಲ್ಲಿ ಇನ್ನೂ ಖ್ಯಾತಿಯ ಪ್ರತೀಕ್ಷೆ ಮಾಡುತ್ತಾ ಕುಳಿತಿರುತ್ತಿದ್ದೆವೋ ಗೊತ್ತಿಲ್ಲ.

ಎರಡನೆಯ ಹೆಸರು ಧಾರವಾಡದ ಮನೋಹರ ಗ್ರಂಥ ಮಾಲಾ ಪ್ರಕಾಶನ ಸಂಸ್ಥೆಯದು. ಹಸ್ತಪ್ರತಿಯಲ್ಲೇ ನನ್ನ `ಯಯಾತಿ~ ನಾಟಕವನ್ನೋದಿ  ಮೆಚ್ಚಿ ಹುರಿದುಂಬಿಸಿದವರು ಗ್ರಂಥಮಾಲೆಯ ಸಲಹೆಗಾರರಾದ ಕೀರ್ತಿನಾಥ ಕುರ್ತಕೋಟಿಯವರು.
 
ಅವರು ಕಂಬಾರರ `ಋಷ್ಯಶೃಂಗ~ ನಾಟಕವನ್ನು ಓದಿದಾಗಲಂತೂ  ಯಾವ ತರಹ ಹುಚ್ಚೆದ್ದು ಕುಣಿದಿದ್ದರೆಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಾಟಕಗಳನ್ನು ಪ್ರಕಟಿಸುವದೆ ಮೂರ್ಖತನ ಎಂಬ ನಂಬಿಗೆಯಿದ್ದ ಆ ಕಾಲದಲ್ಲಿ ಈ ಎರಡೂ ನಾಟಕಗಳನ್ನು ಪ್ರಕಟಿಸಿ ನನಗೆ ಹಾಗೂ ಕಂಬಾರರಿಗೆ ವಾಚಕವರ್ಗವನ್ನು ಸೃಷ್ಟಿಸಿ ಕೊಟ್ಟವರು ಗ್ರಂಥಮಾಲೆಯ  ಪ್ರಕಾಶಕರಾದ ಜಿ.ಬಿ. ಜೋಷಿ ಅವರು.

 (ಈ ಗ್ರಂಥಮಾಲೆಯಲ್ಲೇ ಆರನೆಯ ಪ್ರಶಸ್ತಿ ತಂದ ಯು. ಆರ್.  ಅನಂತಮೂರ್ತಿಯವರ `ಸಂಸ್ಕಾರ~ ಮೊದಲು ಬೆಳಕು ಕಂಡಿತ್ತಲ್ಲದೆ, ಎಂಟು ಜ್ಞಾನಪೀಠ ಪುರಸ್ಕೃತರಲ್ಲಿ ಆರು ಮಂದಿಯ ಕೃತಿಗಳು ಗ್ರಂಥಮಾಲೆಯಲ್ಲಿ ಪ್ರಕಟವಾಗಿದ್ದವು ಎಂಬುದನ್ನು ನೆನೆದರೆ ಕೀರ್ತಿ-ಜೀಬಿಯ  ವಿಮರ್ಶಕ ಪ್ರತಿಭೆಗೆ, ಸಹೃದಯತೆಗೆ ಆಶ್ಚರ್ಯವಾಗುತ್ತದೆ). 

 ಈ ಎರಡಲ್ಲದೆ, ಇನ್ನು ಹಲವಾರು ಸಂಬಂಧಗಳಿಂದಾಗಿ ಕಂಬಾರರ ಬೆಳವಣಿಗೆಯೊಡನೆ ನನ್ನದೂ ಹೆಣೆದು ಕೊಂಡಿದೆಯೆಂದು ಒಪ್ಪಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ. ಆದ್ದರಿಂದಲೇ  ನಿನ್ನೆ (ಸೋಮವಾರ) ಈ  ಪುರಸ್ಕಾರದ ಸುದ್ದಿ ಬಂದೊಡನೆ, ಕಂಬಾರರಿಗೆ ಕಳಿಸಿದ ಅಭಿನಂದನೆಯ ಇ-ಮೇಲ್‌ಗೆ  ನಾನು ಸಹಿ ಮಾಡಿದ್ದು `ಗಿರೀಶ ಗೌಡ~ ಎಂದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.