ADVERTISEMENT

ಟಾರ್ ಇಲ್ಲ, ದುರ್ವಾಸನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 4:30 IST
Last Updated 1 ಜೂನ್ 2011, 4:30 IST

ತ್ಯಾಗರಾಜನಗರ ಗಣೇಶ ಮಂದಿರ ರಸ್ತೆಗೆ ಟಾರ್ ಹಾಕುವ ಬಗ್ಗೆ ಸುಮಾರು 3 ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಜೆಲ್ಲಿಯನ್ನು ರಸ್ತೆಗೆ ಹಾಕಿ ಬಿಡಲಾಗಿದೆ.

ಈ ಹಿಂದೆ ನಲ್ಲಿ ನೀರಿನ ಸಂಪರ್ಕ ಕೊಡುವುದಕ್ಕಾಗಿ ರಸ್ತೆ ಅಗೆದು ಪೈಪುಗಳನ್ನು ಜೋಡಿಸಿದ್ದರು. ಇದರ ಬೆನ್ನಲ್ಲೇ ಪ್ರತಿಯೊಂದು ಮನೆಯವರು ಮತ್ತೆ ರಸ್ತೆ ಅಗೆದು ನೀರಿನ ಸಂಪರ್ಕ ತೆಗೆದುಕೊಂಡರು. ಇದು ನಡೆದು ಸುಮಾರು ಒಂದೂವರೆ ವರ್ಷ ಆಗಿದೆ. ರಸ್ತೆ ಅಗೆದ ಗುಂಡಿಗಳಿಗೆ ಜಲ್ಲಿ ಹಾಕಿ 3 ತಿಂಗಳು ಆಗಿದೆ. ಆದರೆ ಇದುವರೆಗೂ ಇದಕ್ಕೆ ಟಾರ್ ಬಿದ್ದಿಲ್ಲ.

ಇನ್ನು ಒಳಚರಂಡಿ ದುರಸ್ತಿಗೆ ಪೈಪುಗಳನ್ನು ತಂದು ಸುಮಾರು ಒಂದೂವರೆ ತಿಂಗಳ ಕೆಳಗೆ ರಸ್ತೆ ಅಕ್ಕಪಕ್ಕಗಳಲ್ಲಿ ಸಂಗ್ರಹಿಸಿದ್ದಾರೆ. ಪೈಪುಗಳು ಮಾತ್ರ ಬಿಸಿಲಿನಲ್ಲಿ ಒಣಗುತ್ತಾ ಇವೆ. ಅವುಗಳನ್ನು ಜೋಡಿಸಲು ಮುಹೂರ್ತ ಯಾವಾಗ ಬರುತ್ತದೋ ಗೊತ್ತಾಗುತ್ತಿಲ್ಲ.

ಇದಲ್ಲದೆ ಇದೇ ರಸ್ತೆಯ ಮನೆಯೊಂದರ ಪೈಪ್ ಒಡೆದು ಹೊಲಸು ನೀರು ಚರಂಡಿಗೆ ಸೇರುತ್ತಿದೆ. ಮ್ಯಾನ್‌ಹೋಲ್‌ಗಳು ಮುಚ್ಚಿ, ಸಹಿಸಲು ಅಸಾಧ್ಯವಾದ ದುರ್ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಈ ಪೈಪು ಒಡೆದು ಹೊಲಸು ನೀರು ಚರಂಡಿಗೆ ಬರುತ್ತಿರುವುದನ್ನು ಪಾಲಿಕೆ ಸಿಬ್ಬಂದಿ ಕೆಲವು ದಿವಸಗಳ ಹಿಂದೆ ಆ ಮನೆಯವರಿಗೆ ತಿಳಿಸಿದರೂ, ಅದು ನಮ್ಮ ಮನೆಯದಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಾ ಸುಮ್ಮನಿದ್ದಾರೆ. ಈ ದುರ್ವಾಸನೆಯಿಂದ ಈ ರಸ್ತೆಯಲ್ಲಿ ಓಡಾಡುವರು, ಅಕ್ಕಪಕ್ಕದ ಮನೆಯವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮನೆಯ ಬಾಗಿಲುಗಳನ್ನು, ಕಿಟಕಿಗಳನ್ನೂ ತೆಗೆಯುವಂತಿಲ್ಲ. ಇದು ರೋಗಗಳಿಗೆ ಕಾರಣವಾಗುತ್ತಿದೆ.

ಸಂಬಂಧಪಟ್ಟವರು ಇತ್ತ ಗಮನಹರಿಸಿ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆಂದು ನಂಬಿರುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.