ADVERTISEMENT

ತೊಗಲುಗೊಂಬೆಯಾಟ: ವಿವಾದ ವಿಷಾದನೀಯ

ಡಾ.ಟಿ.ಗೋವಿಂದರಾಜು
Published 20 ಮೇ 2014, 19:30 IST
Last Updated 20 ಮೇ 2014, 19:30 IST

ತೊಗಲುಗೊಂಬೆಯಾಟವನ್ನು ಯಕ್ಷ ಗಾನ ಬಯಲಾಟ ಅಕಾಡೆಮಿ ವ್ಯಾಪ್ತಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ವಿವಾದಕ್ಕೆ ಕಾರಣವಾಗಿರುವುದು ವಿಷಾದನೀಯ ಸಂಗತಿ. ಯಕ್ಷಗಾನವೂ, ಜಾನ­ಪದದ ಒಂದು ಕಲಾ ಪ್ರಕಾರವೇ. ಬಯಲಾಟದ ಇನ್ನೊಂದು ಹೆಸರೇ ಯಕ್ಷಗಾನ.

ಆದರೂ, ಕಾರ­ಣಾಂತರಗಳಿಂದ ‘ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ ಎಂದು ಹೆಸರಿಡಲಾಗಿತ್ತು. ತದನಂತರ, ಒತ್ತಡಗಳಿಗೆ ಮಣಿದು ಜಾನಪದದಿಂದ ಯಕ್ಷಗಾನ ಬೇರ್ಪಡಿಸಿ, ‘ಯಕ್ಷಗಾನ ಬಯಲಾಟ ಅಕಾಡೆಮಿ’­ಯನ್ನು ರೂಪಿಸ­ಲಾಯಿತು. ಹೀಗೆ ಹೆಸರಿಡುವಾಗ, ‘ಯಕ್ಷಗಾನ’ ದೊಂದಿಗೆ ಇತರ ‘ಬಯಲಾಟ’ ರೂಪಗಳೂ ಸೇರಿರುತ್ತವೆ ಎಂದೇ ಆಶಿಸ­ಲಾಗಿತ್ತು. ಆದರೂ ಕೆಲವರಿಗೆ ಯಕ್ಷಗಾನ­ವೆಂದರೆ ‘ಅದು’ ಮಾತ್ರವೇ ಇರತಕ್ಕುದ್ದು ಎಂಬ ಮನೋಭಾವ ಇದ್ದಂತಿದೆ.

ಮೂಡಲಪಾಯ, ದೊಡ್ಡಾಟ, ಕೃಷ್ಣಪಾರಿಜಾತ ಮತ್ತಿತರ ರಂಗ ಪ್ರಕಾರಗಳಿಗೆ ಅಲ್ಲಿ ತೃಪ್ತಿಕರವಾದ ಪ್ರಾತಿನಿಧ್ಯ ದೊರೆತಿರಲಿಲ್ಲ ಎಂಬುದಕ್ಕೆ ಹಿಂದಿನ ಅವಧಿಯ ಸದಸ್ಯರ, ಪ್ರಶಸ್ತಿ ಪಡೆದ ಕಲಾವಿದರ ಹಾಗೂ ಅಧ್ಯಕ್ಷರಾದವರ ಪಟ್ಟಿಯೇ ಸಾಕ್ಷಿಯಾಗುತ್ತದೆ. ಎಲ್ಲ ಕಲೆ, ಕಲಾವಿದರ ಹಿತಕ್ಕಾಗಿಯೇ ಸರ್ಕಾರ ಅಕಾಡೆಮಿ, ಪ್ರಾಧಿಕಾರಾದಿ­ಗಳನ್ನು ಸ್ಥಾಪಿಸಿದೆ.

ಹಾಗೆಂದು, ಪ್ರತಿ ಪ್ರಕಾ­ರಕ್ಕೂ ಒಂದೊಂದು ಪ್ರತ್ಯೇಕ ಅಕಾಡೆಮಿ ಸ್ಥಾಪನೆ ಸಾಧ್ಯವಲ್ಲವಾದ್ದರಿಂದ ಕೆಲವೊಂದು ಉಪ ಪ್ರಕಾರಗಳನ್ನು ಮುಖ್ಯವಾದುದ­ರೊಂದಿಗೆ ಸೇರಿಸಿ ಅಕಾಡೆಮಿಗಳನ್ನು ರೂಪಿಸಿದೆ. ಇರುವ ಅಕಾಡೆಮಿಗಳು ತಮ್ಮದೇ ಒಂದು ಬೇಲಿಯನ್ನು ನಿರ್ಮಿಸಿಕೊಂಡು ಇತರ ಕಲೆ, ಕಲಾ­ವಿದರನ್ನು ತಮ್ಮಿಂದ ಹೊರಗಿಟ್ಟು, ಸರ್ಕಾರದ ಎಲ್ಲಾ ಸವಲತ್ತು ತಮಗೆ ಮಾತ್ರವೇ ಮೀಸಲು ಎಂದು ಭಾವಿಸಿರುವುದು, ಅವಕಾಶ ವಂಚಿತರು, ‘ಹಾಗಿದ್ದಲ್ಲಿ, ತಮಗೂ ಬೇರೊಂದು ಅಕಾಡೆಮಿ ಕೊಡಿ’ ಎಂದು ಸರ್ಕಾರಕ್ಕೆ ಒತ್ತಡ ಹಾಕುತ್ತಿರು­ವುದು ನಡೆದೇ ಇದೆ.

ಈ ವಿವಾದ ಸದ್ಯಕ್ಕೆ ಬಗೆಹರಿಯುವುದು ಸಾಧ್ಯವೇ ಇಲ್ಲ. ಬಲ ಇದ್ದವರು ಅಕಾಡೆಮಿ ಸವಲತ್ತು ಗಿಟ್ಟಿಸಿಕೊಳ್ಳುತ್ತಾರೆ; ಹಾಗಿಲ್ಲ­ದವರು ತಬ್ಬಲಿ ಮಕ್ಕಳಂತೆ ಕೊರಗುತ್ತಾ ಇರಬೇಕಾಗುತ್ತದೆ.
–ಡಾ.ಟಿ. ಗೋವಿಂದರಾಜು,  ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.