ADVERTISEMENT

ದಾವಣಗೆರೆ-ತುಮಕೂರು ಮಧ್ಯೆ ಜೋಡಿ ರೈಲು ಮಾರ್ಗವಾಗಲಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:30 IST
Last Updated 18 ಜನವರಿ 2011, 19:30 IST

ದಾವಣಗೆರೆಯಿಂದ ತುಮಕೂರಿಗೆ ಚಿತ್ರದುರ್ಗ, ಹಿರಿಯೂರು ಮೂಲಕ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಈ ವರ್ಷದ ಬಜೆಟ್‌ನಲ್ಲಿ ಮಂಜೂರಾಗಿರುವುದು ಸರಿ. ಈ ಕಾರ್ಯಕ್ಕೆ 700 ಕೋಟಿ ಹಣ ಬಿಡುಗಡೆಯಾಗಿರುವುದಾಗಿ ಚಿತ್ರದುರ್ಗದ ಸಂಸದರು ಹೇಳಿರುವುದು ಸಂತೋಷದ ವಿಷಯ.

ಹಿಂದೆ ಈ ಮಾರ್ಗದಲ್ಲಿ (ಅರಸೀಕೆರೆ ಮೂಲಕ) ಕೆಲವೇ ರೈಲುಗಳು ಓಡಾಡುತ್ತಿದ್ದು, ಒಂದೇ ಮಾರ್ಗ ಸಾಕಾಗಿತ್ತು. ದಾವಣಗೆರೆ- ಬೆಂಗಳೂರು ನಡುವೆ ಎರಡೂ ಕಡೆಯಿಂದ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣ ಮಾಡುವಂತಾಗಿದೆ. ನೇರ ರೈಲು ಸಂಪರ್ಕ ವ್ಯವಸ್ಥೆಯಾದರೆ ಸುಮಾರು 65 ಕಿ.ಮೀ. ದೂರ ಕಡಿಮೆಯಾಗಿ ಪ್ರಯಾಣಿಕರ ಒತ್ತಡ ಇನ್ನೂ ಹೆಚ್ಚುವುದು ನಿಶ್ಚಿತವಾಗಿದೆ.

ಇತ್ತೀಚೆಗೆ ರೈಲುಗಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿ ಒಂದೇ ಮಾರ್ಗದಿಂದ ಕ್ರಾಸಿಂಗ್‌ಗಳು ಅನಿವಾರ್ಯವಾಗಿ ಯಾವ ರೈಲುಗಳೂ ಸರಿಯಾದ ಸಮಯಕ್ಕೆ ಗುರಿ ಮುಟ್ಟಲಾಗುತ್ತಿಲ್ಲ. ಈ ಕಾರಣಗಳಿಂದ ಈಗ ಮಂಜೂರಾಗಿರುವ ಈ ಮಾರ್ಗವನ್ನು ಜೋಡಿ ಮಾರ್ಗವನ್ನಾಗಿ ನಿರ್ಮಿಸುವುದು ಅವಶ್ಯಕವಾಗಿದೆ.

ಇತ್ತೀಚೆಗೆ ತುಮಕೂರು- ಬೆಂಗಳೂರು ನಡುವೆ ಜೋಡಿ ಮಾರ್ಗ ನಿರ್ಮಿಸಿದ್ದು, ಕ್ರಮೇಣ ಹಂತ ಹಂತವಾಗಿ ದಾವಣಗೆರೆಯಿಂದ ಹುಬ್ಬಳ್ಳಿ, ಬೆಳಗಾವಿ ನಂತರ ಪುಣೆವರೆಗೆ ಜೋಡಿ ಮಾರ್ಗವನ್ನಾಗಿ ನಿರ್ಮಿಸುವುದರಿಂದ ಈ ಮುಖ್ಯ ಮಾರ್ಗದಲ್ಲಿ ತ್ವರಿತ ಪ್ರಯಾಣಕ್ಕೆ ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.