ADVERTISEMENT

ದೀಪದ ಕೆಳಗಿನ ಕತ್ತಲೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಬಿಬಿಎಂಪಿ ರಚನೆಯಾದಾಗ ಹೆಗ್ಗನಹಳ್ಳಿಯೂ ಪ್ರಗತಿಯಾಗುತ್ತದೆ ಅಂತ ಕನಸು ಕಂಡಿದ್ದೆವು. ಬಡಾವಣೆಯಲ್ಲಿ ಜೆ.ಸಿ.ಬಿ. ಬಂದವು. ಮೋರಿಗೆ, ಒಳಚರಂಡಿ ಕಾಮಗಾರಿಗೆ, ನೀರಿನ ಪೈಪ್ ಜೋಡಣೆಗೆ ಎಂದು ರಸ್ತೆ ಅಗೆತ ಆರಂಭಿಸಿದವು. ಕಿರಿಕಿರಿಯಾದರೂ ಒಳಿತಿಗಾಗಿ ತಾನೇ ಎಂದು ಸಹಿಸಿದೆವು.

ಒಂದು ದಿನ ಕೆಲಸದಿಂದ ಮನೆಗೆ ಹಿಂತಿರುಗುವಷ್ಟರಲ್ಲಿ ಮನೆ ಮುಂದೆ 3-5 ಅಡಿ ಆಳದ ಕಂದಕವನ್ನು ಮೋರಿಗಾಗಿ ತೋಡಿದ್ದರು. ನೈರ್ಮಲ್ಯಕ್ಕೆ ತಾನೇ ಎಂದು ಸಮಾಧಾನಿಸಿಕೊಂಡು ಹಾರಿಕೊಂಡೇ ಮನೆ ಸೇರಿದೆವು. ಆಮೇಲೆ ಅದನ್ನು ಮುಚ್ಚುವುದಕ್ಕೆ ಎಷ್ಟು ದಿನ ಆಯ್ತು? ಎಷ್ಟು ಕಷ್ಟ ಪಟ್ಟೆವು? ಆ ಮೋರಿ ಎಷ್ಟು ಗಟ್ಟಿಯಾಗಿದೆ? ಯಾರೂ ಗಮನಿಸಲೇ ಇಲ್ಲ.

ಸ್ವಲ್ಪ ದಿನದ ಹಿಂದೆ ಮತ್ತೆ ಸ್ಯಾನಿಟರಿಗಾಗಿ ಕಾಮಗಾರಿ ಕೈಗೊಂಡರು. ಪೂರ್ಣಗೊಳಿಸಿದರು. ಆದರೆ ನಮ್ಮ ಬೀದೀಲಿ ಅದರ ಮಣ್ಣು ಹಾಗಯೇ ಉಳಿದಿದೆ.
ಕಾವೇರಿ ನೀರಿಗೆ ಹಣ ಕಟ್ಟಿದ್ದಾಯ್ತು, ಸಂಪರ್ಕ ಕೊಟ್ಟರು, ಮೀಟರ‌್ರೂ ಬಂತು. ಆದರೆ ನೀರು...? ಬರಲೇ ಇಲ್ಲ. ಈ ಹಿಂದೆ ಬೀದಿಯಲ್ಲಿನ ನಲ್ಲಿಯಲ್ಲಿ ಸಿಎಂಸಿ ನೀರಾದ್ರೂ ಬರುತ್ತಿತ್ತು. ಈಗ ಅದೂ ನಿಂತು ಹೋಯ್ತು. ನಮ್ಮ ರಸ್ತೆಗೆ ಕಸದ ವಾಹನವೇ ಬರಲ್ಲ.

ಹಿಂದಿನ ಬೀದಿ, ಪಕ್ಕದ ಬೀದಿ, ಮುಂದಿನ ಬೀದಿಗೆಲ್ಲಾ ಬರೋ ವ್ಯಾನ್ ನಮ್ಮ ಬೀದಿ ಕಡೆ ತಿರುಗೋದೇ ಇಲ್ಲ. ಡೆಡ್ ಎಂಡ್ ಅಂತಾ ಹೇಳ್ತಾರೆ. ಮರಳು, ಲಾರಿ, ಕಲ್ಲು ಲಾರಿ ಬರುತ್ತೆ, ದಿನಾ ನೀರಿನ ಲಾರಿ ಬರುತ್ತೆ, ಯಾರ್ ಯಾರ್‌ದೋ ದೊಡ್ಡ ದೊಡ್ಡ ಲಾರಿಗಳು ಇದೇ ಬೀದಿಯಲ್ಲಿ ವಿಶ್ರಾಂತಿ ಪಡೆಯುತ್ತದೆ. ಈ ಕಸದ ಗಾಡಿ ಬರಕ್ಕೆ ಆಗಲ್ವಾ? ಇಷ್ಟೆಲ್ಲಾ ಅವ್ಯವಸ್ಥೆಯ ಆಗರ ಹೆಗ್ಗನಹಳ್ಳಿ ಕ್ರಾಸ್‌ನ 1ನೇ ಮುಖ್ಯ ರಸ್ತೆ, 1ನೇ ಅಡ್ಡರಸ್ತೆಯಲ್ಲಿ.

ಮುಖ್ಯ ರಸ್ತೆಯಿಂದ ಬಂದರೆ ಬಲಕ್ಕೆ ಬಿ.ಬಿ.ಎಂ.ಪಿ. ಹೆಗ್ಗನಹಳ್ಳಿ ವಾರ್ಡ್-71ರ ಸದಸ್ಯರಾದ ಕಾರ್ಪೊರೇಟರ್ ನಿವಾಸ ಇದೆ. ದೀಪದ ಕೆಳಗಿನ ಕತ್ತಲೆ ಎಂಬಂತೆ, ಎಡಕ್ಕೆ ಬಡಪಾಯಿಗಳಾದ ನಮ್ಮಗಳ ವಾಸ. ಈ ಸಮಸ್ಯೆಗಳ ಬಗ್ಗೆ ಬಿ.ಬಿ.ಎಂ.ಪಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂಬುದು ನಮ್ಮೆಲ್ಲರ ಕಳಕಳಿಯ ಮನವಿ.
-

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.