ADVERTISEMENT

ನಿಜವಾದ ಆರೆಸ್ಸೆಸ್ ಸಂಸ್ಕೃತಿ ಏನಾಯಿತು?

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರೆ, ನಿಮಗೆ ನನ್ನ ಒಂದು ಪ್ರಾಮಾಣಿಕ ಪ್ರಶ್ನೆ. ಈ ಪ್ರಶ್ನೆ ಅನೇಕ ನಿಸ್ವಾರ್ಥ, ನಿಷ್ಠಾವಂತ ಸ್ವಯಂ ಸೇವಕರನ್ನು ಬಹಳ ದಿನಗಳಿಂದ ಕಾಡಿಸುತ್ತದೆ. ಈಗಿನ ಕರ್ನಾಟಕದ ರಾಜಕೀಯ ಈ ಪ್ರಶ್ನೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತೆ ಮಾಡಿದೆ.

ಸಂಘದ ಸ್ವಯಂಸೇವಕರು ಸಂಘ ಸಂಪರ್ಕವಾದಾಗಿನಿಂದಲೂ ನಿಸ್ವಾರ್ಥತೆಯನ್ನು ಸಂಘದ ಮತ್ತು ರಾಷ್ಟ್ರದ ಬಗ್ಗೆ ನಿಷ್ಠತೆಯನ್ನು ಪ್ರಶ್ನಾತೀತವಾಗಿ ಪಾಲಿಸುವುದು ಸಂಘದ ಸಂಸ್ಕೃತಿ.

ಕಾಲಾನುಕಾಲಕ್ಕೆ ಕಾರಣಾಂತರಗಳಿಂದ, ಸಾಂದರ್ಭಿಕವಾಗಿ ಅನೇಕ ಸ್ವಯಂ ಸೇವಕರುಗಳು ಬಿ.ಜೆ.ಪಿ. ವತಿಯಿಂದ ರಾಷ್ಟ್ರದ ಮತ್ತು ರಾಜ್ಯಗಳ ರಾಜಕೀಯ ಸಂಪರ್ಕಕ್ಕೆ ಬಂದಿದ್ದಾರೆ. ರಾಜಕೀಯ ಜೀವನದಲ್ಲಿ ಈ ಸ್ವಯಂ ಸೇವಕರುಗಳು ಇಚ್ಛೆ ಇದ್ದೋ ಇಲ್ಲದೆಯೋ, ಸಂಘ ಸಂಸ್ಕೃತಿಗೆ ಸಾಕಷ್ಟು ವಿದಾಯ ಹೇಳಿದ್ದಾರೆ.
 
ಈ ಬೆಳವಣಿಗೆ ಬಗ್ಗೆ ಸಂಘದ ನಾಯಕರುಗಳು ಸಾಕಷ್ಟು ಗಮನ ಹರಿಸಿಲ್ಲವೆನಿಸುತ್ತದೆ.
ಕರ್ನಾಟಕದಲ್ಲಿ ಸಂಪೂರ್ಣವಾಗಿ ಹದಗೆಟ್ಟ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ಸರಸಂಘ ಚಾಲಕರಾದ ಮೋಹನ್‌ಜೀ ಭಾಗವತರಲ್ಲಿ ಒಂದು ವಿನಂತಿ.
 
ಭ್ರಷ್ಟಾಚಾರದಿಂದ ಅಸ್ತಿತ್ವಕ್ಕೆ ಬಂದಿರುವ ಬಿ.ಜೆ.ಪಿ. ರಾಜ್ಯ ಸರ್ಕಾರ ಯಾವ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಭ್ರಷ್ಟಾಚಾರದಲ್ಲಿಯೇ ಮುಂದುವರೆಯುವುದು ಯಾವ ನಾಗರಿಕ ಪ್ರಜೆಯೂ ಒಪ್ಪುವಂತಹದ್ದಲ್ಲ. ಅತ್ಯಂತ ಮುಖ್ಯ ಸ್ಥಾನದಲ್ಲಿರುವ ಸಂಘದ ನಾಯಕರೇ ರಾಜ್ಯದಲ್ಲಿ ಸಂಘ ಸಂಸ್ಕೃತಿಯನ್ನು ಬೆಳೆಸುವುದು ಆದ್ಯತೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.