ವಿದ್ಯಾರ್ಥಿಗಳು ಪ್ರಶ್ನೆಗೆ ತಕ್ಕ ಉತ್ತರವನ್ನಷ್ಟೇ ಬರೆಯಬೇಕೆಂಬ ಉದ್ದೇಶದಿಂದ 2006ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪ್ರಶ್ನೆ ಸಹಿತ ಉತ್ತರ ಪತ್ರಿಕೆಯನ್ನು ನೀಡುವ ಪದ್ಧತಿ ಆರಂಭವಾಯಿತು.
ಆದರೆ ಈ ವರ್ಷ ನಡೆದ ಪರೀಕ್ಷೆಗಳಲ್ಲಿ ಕನ್ನಡ ಪ್ರಥಮ ಭಾಷೆ ಪತ್ರಿಕೆಯಲ್ಲಿ ಎರಡು ಅಂಕಗಳ, 3-4 ವಾಕ್ಯಗಳಲ್ಲಿ ಉತ್ತರಿಸುವ ಪ್ರಶ್ನೆಗಳಿಗೆ ಹೆಚ್ಚು ಸ್ಥಳಾವಕಾಶ ನೀಡಿ ನಾಲ್ಕು ಅಂಕಗಳ ಪ್ರಬಂಧ ಮಾದರಿ ಪ್ರಶ್ನೆಗಳಿಗೆ ಕಡಿಮೆ ಸ್ಥಳಾವಕಾಶ ನೀಡಲಾಗಿತ್ತು.
ಶಿಕ್ಷಕರು ತರಗತಿಯಲ್ಲಿ ಇಡೀ ವರ್ಷ ಪ್ರಬಂಧ ಮಾದರಿ ಪ್ರಶ್ನೆಗಳಿಗೆ ಸ್ವಲ್ಪ ವಿವರವಾಗಿ ಉತ್ತರ ಬರೆಯುವುದನ್ನು ಕಲಿಸಿರುತ್ತಾರೆ. ಪ್ರಶ್ನೆ ಪತ್ರಿಕೆಯಲ್ಲಿ ಕೊಟ್ಟಿರುವ ಏಳು- ಎಂಟು ಸಾಲುಗಳ ಸ್ಥಳಾವಕಾಶ ಉತ್ತರ ಬರೆಯಲು ಸಾಲದಾಯಿತು ಎಂದು ಅನೇಕ ವಿದ್ಯಾರ್ಥಿಗಳು ಪರೀಕ್ಷೆ ನಂತರ ಹೇಳಿದ್ದಾರೆ.
ಪ್ರಬಂಧ ಮಾದರಿ ಪ್ರಶ್ನೆಗಳಿಗೆ ಉತ್ತರಿಸುವ ವಿದ್ಯಾರ್ಥಿ ಸಾಮರ್ಥ್ಯವನ್ನು ಆಧರಿಸಿ ಬರವಣಿಗೆ ಕೌಶಲ ರೂಪುಗೊಳ್ಳುತ್ತದೆ. ಆದರೆ ನಾಲ್ಕು ವಾಕ್ಯಗಳನ್ನು ಬರೆಯುವಷ್ಟರಲ್ಲಿ ಕೊಟ್ಟಿರುವ ಸ್ಥಳ ಮುಗಿಯುತ್ತದೆ.
ಬರವಣಿಗೆಯನ್ನು ಮೊಟಕುಗೊಳಿಸುವ ಪ್ರಶ್ನೆ ಪತ್ರಿಕೆ ಬದಲಾಗಿ ವ್ಯಾಕರಣಾಂಶ ಹಾಗೂ ಬಿಟ್ಟ ಸ್ಥಳವನ್ನು ಭರ್ತಿ ಮಾಡುವ ಪ್ರಶ್ನೆಗಳಿಗೆ ಮಾತ್ರ ಪ್ರಶ್ನೆ ಸಹಿತ ಉತ್ತರ ಪತ್ರಿಕೆ ಹಾಗೂ ವಿವರಣಾತ್ಮಕ ಪ್ರಶ್ನೆಗಳಿಗೆ ಪ್ರತ್ಯೇಕ ಖಾಲಿ ಉತ್ತರ ಪತ್ರಿಕೆ ಕೊಡುವ ಪದ್ಧತಿ ಜಾರಿಗೆ ತರಬೇಕು. ಪರೀಕ್ಷಾ ಮಂಡಳಿ ಈ ಕುರಿತು ಚಿಂತಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.