ADVERTISEMENT

ಬಡವರ ಅನ್ನದ ಮೇಲೇಕೆ ಕೆಂಗಣ್ಣು?

ಸವಿತಾ ನಾಗಭೂಷಣ್
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯಂತೆ ಬಡವರಿಗೆ 30 ಕೆ.ಜಿ ಅಕ್ಕಿ ಕೊಡುವ ಮುಖ್ಯಮಂತ್ರಿಗಳ ಪ್ರಕಟಣೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಆದರೆ ಮುಖ್ಯಮಂತ್ರಿಗಳ ನಿರ್ಧಾರ ನನಗಂತೂ ಸಂತೋಷ ತಂದಿದೆ. ಏಕೆಂದರೆ, ಇಂದು ಚರ್ಚೆಯಾಗಬೇಕಿರುವುದು ಸಚಿವರ, ಶಾಸಕರ, ಸರ್ಕಾರಿ ಅಧಿಕಾರಶಾಹಿ ಮತ್ತು ಕೆಲ ನೌಕರ ವರ್ಗದವರ ಸಂಬಳ-ಸಾರಿಗೆ-ಸವಲತ್ತುಗಳ ಬಗ್ಗೆಯೇ ಹೊರತು ಬಡವರಿಗೆ ನೀಡಹೊರಟಿರುವ ಅಕ್ಕಿಯ ಬಗ್ಗೆ ಅಲ್ಲ. ನಾನೇ ಕಂಡಿರುವಂತೆ, ಕೇಳಿರುವಂತೆ ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳ ಮನೆಗಳ ನಾಯಿಗಳಿಗೂ ಐಷಾರಾಮಿ ಸರ್ಕಾರಿ ಕಾರ್‌ಗಳಲ್ಲಿ ವಾಯುವಿಹಾರಕ್ಕೆ ಹೋಗುವ ಭಾಗ್ಯವಿದೆ.

ಇವರಂತಹವರ ಮತ್ತು ಸರ್ಕಾರದ ಉದಾರ ನೀತಿಯಿಂದ ಕೊಬ್ಬಿರುವ ಕೆಲವು ಖಾಸಗಿ ಕಂಪನಿಗಳ ಮಾಲೀಕರ ಅಕ್ರಮ ಸಂಪಾದನೆ, ಭ್ರಷ್ಟಾಚಾರ ಮತ್ತು ದುರಾಚಾರಗಳಿಗೆ ಕಡಿವಾಣ ಹಾಕಿದರೆ ಬಡವರಿಗೇನು ದೇಶದ ಸಕಲ ಜನತೆಗೂ ಸುಲಭ ದರದಲ್ಲಿ ಅಕ್ಕಿ ನೀಡಬಹುದೇನೋ.

ನನಗೆ ತಿಳಿದಂತೆ 30 ಕೆ.ಜಿ. ಅಕ್ಕಿ ಅನೇಕ ಬಡ ಕುಟುಂಬಗಳ ಹೆಣ್ಣು ಮಕ್ಕಳ ಕಣ್ಣಿಗೆ ನಿದ್ದೆ ಕೊಡಬಲ್ಲುದು. ಆಕೆಗೆ ಕೊಂಚವಾದರೂ ನೆಮ್ಮದಿ ತರಬಹುದು. ಏಳುತ್ತಲೇ ಗಂಡ ಮಕ್ಕಳ ಹೊಟ್ಟೆ ತುಂಬಿಸಬೇಕಾದ ಅವಳ ಚಿಂತೆ ಕಳೆಯಬಲ್ಲುದು.

ಹೊಟ್ಟೆ ತುಂಬಿದರೆ ಬುದ್ಧಿಯೂ ಚುರುಕಾಗುತ್ತದೆ. ನಿರುತ್ಸಾಹ, ಹತಾಶೆ, ಆಕ್ರೋಶ, ಅಶಾಂತಿ ಕಡಿಮೆಯಾಗುತ್ತದೆ. ಕಂಗೆಡುವ ಪರಿಸ್ಥಿತಿ, ಅದರಿಂದ ಹುಟ್ಟುವ ಕ್ರೌರ್ಯ ಕಡಿಮೆಯಾಗಿ ಬದುಕುವ ಆಸೆ ಹುಟ್ಟುತ್ತದೆ. ಅದರಿಂದ ಸಮಾಜದಲ್ಲಿ ಶಾಂತಿ ಒಂದಿಷ್ಟಾದರೂ ಹೆಚ್ಚುತ್ತದೆ. ಮನೆಯಲ್ಲಿ ಅಕ್ಕಿ-ಬೇಳೆ ಇದ್ದರೆ ಏನೋ ಆತ್ಮವಿಶ್ವಾಸ-ಆತ್ಮಾಭಿಮಾನ ! ಹಾಗಾಗಿ ಮುಖ್ಯಮಂತ್ರಿಗಳ ಈ ನಿರ್ಧಾರ ಸದ್ಯದ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವೇ.              
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.