ADVERTISEMENT

ಬಿಎಸ್‌ಎನ್‌ಎಲ್ ಸೇವೆ ಎಂಬ ಹೆಸರಿಗೆ ಅಪಚಾರ

ಡಾ.ಎಚ್.ಎಸ್.ಗೋಪಾಲ ರಾವ್
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಕಳೆದ ತಿಂಗಳ 20ರಂದು ತಮ್ಮ ಪತ್ರಿಕೆಯ `ಕುಂದುಕೊರತೆ~ ವಿಭಾಗದ ಮೂಲಕವೇ ಬಿಎಸ್‌ಎನ್‌ಎಲ್‌ನ ಬೇಜಬ್ದಾರಿಯ ಬಗ್ಗೆ ತಿಳಿಸಿದ್ದೆ. ಅದು ಬಿಲ್ ಪಾವತಿಗೆ ಸಂಬಂಧಿಸಿದ ವಿಚಾರವಾಗಿದ್ದರೂ, ಅದರಲ್ಲಿ ಭೂಮಿಯೊಳಗೆ ಕೇಬಲ್ ಹಾಕಿ ಮೊದಲಿನಂತೆ ಭೂಸಂಪರ್ಕದ ದೂರವಾಣಿ ಒದಗಿಸದ ಇಲಾಖೆಯ ಅಸಮರ್ಥತೆಯ ಬಗ್ಗೆಯೂ ಪ್ರಸ್ತಾಪಿಸಿದ್ದೆ. ಬಹುತೇಕ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗ ಇಲ್ಲ ಎನಿಸುತ್ತದೆ. ಇದ್ದಿದ್ದರೆ ನನ್ನ ಪತ್ರಕ್ಕೆ ಒಂದಲ್ಲ ಒಂದು ರೀತಿಯ ಪ್ರತಿಕ್ರಿಯೆ ಬರುತ್ತಿತ್ತು.

ನನ್ನ ಅಧಿಕೃತ ಪತ್ರಕ್ಕೆ ಪ್ರತಿಕ್ರಿಯಿಸಿದ ಲೆಕ್ಕವಿಭಾಗದ ಅಧಿಕಾರಿಯೊಬ್ಬರು ತಮ್ಮ ಲೋಪಕ್ಕಾಗಿ ವಿಷಾದಿಸಿ ಕ್ಷಮೆ ಕೇಳಿದರು. ಇದರಿಂದ ಖುಷಿಪಟ್ಟ ನಾನು ಬಹುತೇಕ ಇಲಾಖೆಯ ಎಲ್ಲ ಅಧಿಕಾರಿಗಳಲ್ಲೂ ಇಂತಹುದೇ ಮನೋಭಾವ ಇರುತ್ತದೆಂಬ ನಿರೀಕ್ಷೆಯಿಂದ ನಮ್ಮ ಪ್ರದೇಶಕ್ಕೆ ಸಂಬಂಧಿಸಿದ ಉಪವಿಭಾಗೀಯ ಎಂಜಿನಿಯರ್ ಮತ್ತು ಉಪಮುಖ್ಯ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಇದೇ ತಿಂಗಳ 3ನೇ ತಾರೀಖು ಸಂಪರ್ಕಿಸಿ ನನ್ನ ಅಹವಾಲನ್ನು ತಿಳಿಸಿದೆ. ಇಬ್ಬರೂ ಅಧಿಕಾರಿಗಳ ಉತ್ತರ ಒಂದೇ ಆಗಿತ್ತು. `ವ್ಯಾವಹಾರಿಕವಾಗಿ ನಷ್ಟವಾಗುವ ಕಾರಣದಿಂದ ಕೇಬಲ್ ಹಾಕಲು ಸಾಧ್ಯವಿಲ್ಲ~ ಮತ್ತು `ಬೇಕೆನಿಸಿದರೆ ದೂರವಾಣಿ ಸಂಪರ್ಕವನ್ನು ನಿಲುಗಡೆಗೊಳಿಸಿಕೊಳ್ಳಿ~. ಇದು ದೂರವಾಣಿ ಇಲಾಖೆಯು ತನ್ನ ಗ್ರಾಹಕರೊಂದಿಗೆ ಹೊಂದಿರುವ ಉಪೇಕ್ಷಾ ಭಾವವನ್ನು ಸ್ಪಷ್ಟಪಡಿಸುತ್ತದೆ. ಅರಸಿನಕುಂಟೆಯಲ್ಲಿ ಈ ಅವ್ಯವಸ್ಥೆ ಉಂಟಾಗಿದೆ.

ರಸ್ತೆ ಅಗಲೀಕರಣದಿಂದ ಕೇಬಲ್ ಹಾನಿಯಾದಾಗ ಕೇಬಲನ್ನು ಪುನಃ ಹಾಕಿ ದೂರವಾಣಿ ಸಂಪರ್ಕವನ್ನು ಮೊದಲಿನಂತೆ ಸಜ್ಜುಗೊಳಿಸುವ ಜವಾಬ್ದಾರಿ ಇಲಾಖೆಯದಲ್ಲವೆ? ಕೇಬಲ್ ಹಾಕಲು ಸಾಧ್ಯವಿಲ್ಲ ಎಂದು ಖಚಿತವಾದ ಮೇಲೂ, ಇದ್ದ ಸಂಪರ್ಕಗಳನ್ನು ಸರಿಪಡಿಸದೆ ಹೊಸ ಸಂಪರ್ಕಗಳ ಬಗ್ಗೆ ಭರವಸೆಯ ಮಾತನಾಡುವ ನೈತಿಕತೆ ಇಲಾಖೆಗಿದೆಯೇ? ರಸ್ತೆ ಅಗಲೀಕರಣವಾದ ನಂತರ ನನ್ನ ಮೊದಲಿನ ಭೂಸಂಪರ್ಕ (080-27722502)ದ ಬದಲು ನಿಸ್ತಂತು ಸಂಪರ್ಕ (27101250) ನೀಡಿ ಅದಕ್ಕೆ ಪಡೆದುಕೊಳ್ಳಲಾಗಿರುವ ಬ್ರಾಡ್‌ಬ್ಯಾಂಡ್ ಉಪಯೋಗಕ್ಕೆ ದಕ್ಕದಿರುವ ಬಗ್ಗೆ ಹಲವು ಬಾರಿ ದೂರವಾಣಿಯ ಮೂಲಕ ಮನವಿ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಸಂಪರ್ಕ ನೀಡಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಪ್ರಕಟಿಸಿದರೆ ಉಪಕಾರವಾಗುತ್ತದೆ. ಹೊಸದಾಗಿ ಕೇಬಲ್ ಹಾಕುವುದಿಲ್ಲ ಎಂದು ಘೋಷಿಸಿದರೆ ಗ್ರಾಹಕರು ಕೃತಾರ್ಥರಾಗುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.