ADVERTISEMENT

ಬುಲೆಟ್‌ ರೈಲು ಬೇಕೇ?

ಕೋ.ಚೆನ್ನಬಸಪ್ಪ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಮುಖ್ಯಮಂತ್ರಿಯವರು ಚೀನಾ ಪ್ರವಾಸ ಮುಗಿಸಿ ಹಿಂದಿರುಗಿದ ಮೇಲೆ, ಚೀನಾದಲ್ಲಿರುವ ಗಂಟೆಗೆ 250 ಕಿ.ಮೀ. ವೇಗದಲ್ಲಿ ಚಲಿಸುವ ಬುಲೆಟ್‌ ರೈಲನ್ನು ಬೆಂಗಳೂರು–ಮೈಸೂರು ನಡುವೆ ಓಡಿಸುವ ಕುರಿತು ಚಿಂತನೆ  ನಡೆಸಿರುವುದಾಗಿ ಹೇಳಿದ್ದಾರೆ.

ಆದರೆ ಈ ಬುಲೆಟ್‌ ರೈಲು ಯಾರಿಗೆ ಬೇಕು? ಏಕೆ ಬೇಕು? ಎಂಬುದನ್ನು ಮುಖ್ಯಮಂತ್ರಿಗಳು ಹೇಳಬೇಕು. ಬೆಂಗಳೂರಿನಿಂದ ಮೈಸೂರಿಗೆ ಅರ್ಧ ಗಂಟೆಯಲ್ಲಿ ಪ್ರಯಾಣ ಮಾಡಬೇಕೆಂಬ ಪ್ರಯಾಣಿಕರು ಬೆಂಗಳೂರಿನಲ್ಲಿ ಎಷ್ಟು ಜನರಿದ್ದಾರೆ? ಹತ್ತಿರ ಹತ್ತಿರ ಒಂದು ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಿಂದ ಮೈಸೂರಿಗೆ 20–30 ನಿಮಿಷಗಳಲ್ಲಿ ತಲುಪಬೇಕೆಂಬ ಜರೂರು ಕೆಲಸವಿರುವವರು ಎಷ್ಟು ಜನರಿದ್ದಾರೆ? ದೇಶದಲ್ಲಿ ಯಾರೂ ಇದುವರೆಗೆ ಮಾಡದಿದ್ದ ಪರಾಕ್ರಮದ ಕೆಲಸ ಮಾಡುತ್ತೇವೆಂಬ ಮೂರ್ಖ ಹುಮ್ಮಸ್ಸಿನ ಹೊರತಾಗಿ ಮತ್ತೇನೂ ಕಾಣದು.

1938ರಲ್ಲಿ ಮೊಟ್ಟ ಮೊದಲನೆಯ ಬಾರಿ ದೇಶದ ಕೆಲವು ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರಗಳು ಅಧಿಕಾರ ವಹಿಸಿಕೊಂಡ ಮೇಲೆ ಮದ್ರಾಸಿನ ದೇಶಭಕ್ತರೊಬ್ಬರು ಗಾಂಧೀಜಿಯನ್ನು ಒಂದು ಪ್ರಶ್ನೆ ಕೇಳಿದರು. ‘ಬಾಪೂ, ನಮಗೆ ಆಡಳಿತ ನಡೆಸಿ ಅನುಭವವಿಲ್ಲ.

ಸತ್ಯಾಗ್ರಹ ಮಾಡಿ ಚಳವಳಿ ಹೂಡಿದವರು ನಾವು, ಹೇಗೆ ಆಡಳಿತ ನಡೆಸಬೇಕು?’ ಎಂದು ಕೇಳಿದರು. ಅದಕ್ಕೆ ಗಾಂಧೀಜಿ ಹೇಳಿದ ಉತ್ತರ– ‘ನೀವು ಅಧಿಕಾರದಲ್ಲಿರುವಾಗ ಯಾವುದಾದರೂ ಒಂದು ಕೆಲಸವನ್ನು ಮಾಡಬೇಕೆ, ಮಾಡಬಾರದೆ ಎಂಬ ಪ್ರಶ್ನೆ ನಿಮ್ಮ ಮುಂದೆ ಬಂದಾಗ, ನೀವು ನೋಡಿದ ಒಬ್ಬ ಸಾಧಾರಣ ಬಡ ಪ್ರಜೆಯನ್ನು ನೆನಪು ಮಾಡಿಕೊಳ್ಳಿ.

ನೀವು ಮಾಡಬೇಕೆಂದಿರುವ ಕೆಲಸ ಆ ಬಡ, ಸಾಧಾರಣ, ಪ್ರಜೆಗೆ ಉಪಯುಕ್ತವೆಂದು ಕಂಡುಬಂದಾಗ ಅದನ್ನು ಮಾಡಿ. ಅವನಿಗೆ ಅದರಿಂದ ಪ್ರಯೋಜನವಿಲ್ಲ ಎಂದು ಕಂಡುಬಂದಾಗ ಅಂತಹ ಕೆಲಸ ಮಾಡಬೇಡಿ’.
ಮುಖ್ಯಮಂತ್ರಿಯವರು ಯೋಚಿಸಿ ಹೆಜ್ಜೆ ಇಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.