ADVERTISEMENT

ಭಗವದ್ಗೀತೆ: ಪ್ರಕ್ಷಿಪ್ತ

ಪ್ರೊ.ಎನ್‌.ವಿ.ಅಂಬಾಮಣಿ ಮೂರ್ತಿ ಬೆಂಗಳೂರು
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ರಾಮಾಯಣ, ಮಹಾಭಾರತ ಮತ್ತು ಪ್ರಕ್ಷಿಪ್ತವನ್ನು ಕುರಿತು ಸಿ. ಪಿ. ಕೆ. ಯವರ ಅಭಿಪ್ರಾಯಕ್ಕೆ (ವಾ. ವಾ. ಡಿ. 6) ನನ್ನ ಪ್ರತಿಕ್ರಿಯೆ. ರಾಮಾಯಣ, ಮಹಾಭಾರತಗಳು ನಮ್ಮ ಪ್ರಾಚೀನ ಭಾರತೀಯ ಸಮಾಜದಲ್ಲಿ ಘಟಿಸಿದ ಐತಿಹಾಸಿಕ ಸಂಗತಿಗಳ ವಿಶಿಷ್ಟ ದಾಖಲೆಗಳಾಗಿವೆ.

ಈ ಸಂಗತಿಗಳು ಕಾಲಾಂತರದಲ್ಲಿ ಕಥಾನಕಗಳಾಗಿ ಜನಪ್ರಿಯತೆಯನ್ನು ಗಳಿಸಿ ತಲೆಮಾರುಗಳಿಂದ ಹರಿದು ಬರುವಾಗ ಜನಮನದ ಕಲ್ಪನೆಯ ಹಲವಾರು ಅಂಶಗಳನ್ನು ಕೂಡಿಕೊಂಡು ವಿಶದೀಕರಣಗೊಂಡು ಬೆಳೆಯುತ್ತದೆ. ಆಗ ಆ ಕಾಲದ ಮನೋಭೂಮಿಕೆಯನ್ನು ಚೆನ್ನಾಗಿ ಗ್ರಹಿಸಿದ ಒಬ್ಬ ಪ್ರತಿಭಾವಂತ ಕವಿ, ಅದಕ್ಕೆ ಒಂದು ಕಲಾತ್ಮಕ ಕಾವ್ಯರೂಪ ಕೊಡುತ್ತಾನೆ.

ಹೀಗೆ ವಾಲ್ಮೀಕಿ- ವ್ಯಾಸರಿಂದ ರಚಿತವಾದುದೇ ರಾಮಾಯಣ - ಮಹಾಭಾರತ. ಈ ಎರಡೂ ಕಾವ್ಯಗಳು ಮೂಲದಲ್ಲಿ ಚಿಕ್ಕ ಪ್ರಮಾಣದಲ್ಲಿದ್ದುದು ಕಾಲದಿಂದ ಕಾಲಕ್ಕೆ ಹಲವಾರು ಜನರ ರಚನೆಗಳು ಸೇರುತ್ತಾ ಹೋಗಿ ಬೃಹದಾಕಾರ ಪಡೆದುಕೊಂಡಿದೆ. ಪುರಾಣ ಕಾವ್ಯಗಳು ಬೆಳೆದು ಬರುವುದೇ ಸಾಮಾನ್ಯವಾಗಿ ಹೀಗೆ.

ADVERTISEMENT

ಆದ್ದರಿಂದ ರಾಮಾಯಣ - ಭಾರತಗಳು ಅಪಾರವಾಗಿ ಇಂಥ ಪ್ರಕ್ಷಿಪ್ತದಿಂದಲೇ ಬೃಹತ್ತಾಗಿ ಬೆಳೆದು ಬಂದಿದೆ. ಆಧುನಿಕ ವಿದ್ವಾಂಸರು, ವಿಮರ್ಶಕರು ಮೂಲಕ್ಕೂ - ಪ್ರಕ್ಷಿಪ್ತಕ್ಕೂ ಇರುವ ಭಿನ್ನ ಭಾಷೆ, ಶೈಲಿ ಶಬ್ಧ ಪ್ರಯೋಗ ಹಾಗೂ ವಿಚಾರಗಳ ಮಂಡನೆ - ಇವುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ವ್ಯತ್ಯಾಸವನ್ನು ಕಂಡು ಹಿಡಿಯುತ್ತಾರೆ. ಈ ದಿಸೆಯಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ.

ಗೀತೆಯು ಯುದ್ಧಭೂಮಿಯಲ್ಲಿ ಕೃಷ್ಣಾರ್ಜುನರ ನಡುವೆ ನಡೆದ ಸಂವಾದವಾಗಿದ್ದರೂ, ಇದರ ಸುದೀರ್ಘ ವಿಶದೀಕರಣ ಕಾವ್ಯವನ್ನು ಆ ನಂತರ ಪ್ರತಿಭಾವಂತರೂ ಮೇಧಾವಿಗಳೂ ಆದ ಮೂವರು ಲೇಖಕರು ಬೇರೆ ಬೇರೆ ಕಾಲದಲ್ಲಿ ರಚಿಸಿ ಹಿಗ್ಗಿಸಿರಬೇಕೆಂಬುದು ಆಧುನಿಕ ಸಂಶೋಧಕರಾದ ಜಿ. ವಿ. ಕೇಟ್ಕರ್, ಜಿ. ಎಸ್. ಖೇರ್ ಮುಂತಾದವರು ಹಾಗೂ ಡಬ್ಲ್ಯು ಹಂಬೋಲ್ಚ್ ಮುಂತಾದ ಪಾಶ್ಚಾತ್ಯ ವಿದ್ವಾಂಸರು ಅನೇಕ ಸಾಕ್ಷ್ಯಾಧಾರಗಳನ್ನೊದಗಿಸಿ ವಾದವನ್ನು ಮಂಡಿಸಿದ್ದಾರೆ. (ಭಗವದ್ಗೀತೆ; ಒಂದು ವೈಚಾರಿಕ ಒಳನೋಟ). ಆದ್ದರಿಂದ ಡಾ. ಚಂದ್ರಶೇಖರ ಕಂಬಾರರು ಭಗವದ್ಗೀತೆ ಮಹಾಭಾರತದಲ್ಲಿ ಪ್ರಕ್ಷಿಪ್ತವೆಂದು ಹೇಳಿರುವುದು ಸಮಂಜಸವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.