ADVERTISEMENT

ಮಂಗಳೂರು ನಗರಕ್ಕೆ ಬರಲಿ ಸರ್ಕಾರಿ ಸಿಟಿ ಬಸ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾದ ಮಂಗಳೂರು ಬಹುದಿನಗಳ ಬೇಡಿಕೆಯಿಂದ ವಂಚಿತವಾದ ಪಟ್ಟಣ. ಮಹಾನಗರ ಪಾಲಿಕೆ ವ್ಯಾಪ್ತಿ ಹೊಂದಿ ಕೈಗಾರಿಕೆ, ಶಿಕ್ಷಣ ಸಂಸ್ಥೆಗಳಿರುವ ಮಂಗಳೂರು ಪ್ರತಿನಿತ್ಯ ಹತ್ತಾರು ಸಾವಿರ ಜನರ ಸಂಚಾರಕ್ಕೆ ಸಾಕ್ಷಿಯಾಗಿದೆ.

ಆದರೆ ಇಷ್ಟೆಲ್ಲಾ ಜನ ಪ್ರತಿನಿತ್ಯದ ತಮ್ಮ ನಗರದೊಳಗಿನ ಓಡಾಟಕ್ಕೆ ಖಾಸಗಿ ಸಿಟಿ ಬಸ್ಸನ್ನೇ ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ. ಕರ್ಕಶವಾದ ಹಾರನ್, ಕಂಡಕ್ಟರ್‌ಗಳ ಕಿರುಚಾಟವನ್ನು, ಬಸ್ಸೊಳಗೆ ಅವರು ತೋರುವ ದರ್ಪವನ್ನು, ಕೊಟ್ಟ ಹಣಕ್ಕೆ ಟಿಕೇಟ್ ಪಡೆಯಲಾಗದ ಅಸಹಾಯಕತೆಯಿಂದ ಪ್ರಯಾಣಿಕರು ಪ್ರಯಾಣ ಮಾಡಬೇಕಾಗಿದೆ.

ಈ ಹಿಂದೆ ಹಲವು ಸಲ ಈ ಕುರಿತು ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಿದಾಗಲೂ ಕೇವಲ ಮಾತಿನ ಭರವಸೆಯಷ್ಟೆ ಜನರಿಗೆ ಸಿಕ್ಕಿದ್ದು. ಈ ಜಿಲ್ಲೆಯವರೇ ಆದ ರಮಾನಾಥ ರೈ, ನಾಗರಾಜ ಶೆಟ್ಟಿಯವರು ಸಾರಿಗೆ ಸಚಿವರಾದಾಗಲೂ ನಗರದ ಜನರ ಕೂಗು ಅವರಿಗೆ ತಲುಪಲಿಲ್ಲ.ಆರ್. ಅಶೋಕ್ ಮಂಗಳೂರಿಗೆ ಬಂದಾಗಲೆಲ್ಲಾ ಈ ಕುರಿತು ಭರವಸೆ ನೀಡಿದರೆ ಹೊರತು ಕಾರ್ಯರೂಪಕ್ಕೆ ತರಲಿಲ್ಲ.

 ಕಾರಣ ಸ್ಪಷ್ಟವಾಗಿದೆ. ಈ ಜಿಲ್ಲೆಯ ಖಾಸಗಿ ಬಸ್ ಮಾಲಿಕರ ಲಾಬಿ ಎಷ್ಟು ಪ್ರಬಲವಾಗಿದೆಯೆಂದರೆ, ಒಂದು ಹಂತದಲ್ಲಿ ಮಂಗಳೂರು-ಬೆಂಗಳೂರು ರೈಲು ಓಡಾಟವನ್ನೇ ಮುಂದಕ್ಕೆ ಹಾಕಿಸುವಷ್ಟಿತ್ತು. ಪ್ರಸ್ತುತ ಸಿಟಿ ಬಸ್ ಯೋಜನೆಯನ್ನು ವಿಫಲಗೊಳಿಸುತ್ತಿರುವುದು ಇದೇ ಲಾಬಿ.
 
ಜನ ಪ್ರತಿನಿಧಿಗಳು, ರಾಜಕೀಯ ಮುಖಂಡರು ಇವರ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಒಂದಲ್ಲ ಒಂದು ಹಂತದಲ್ಲಿ ತಮ್ಮ ತಮ್ಮ ರಾಜಕೀಯ ಸಮಾವೇಶ, ಜಾತಿ ಸಮಾವೇಶಗಳಿಗೆ ಈ ಖಾಸಗಿ ಬಸ್ ಮಾಲೀಕರಿಂದ `ಉಚಿತ~ ಸೇವೆಯ ರೂಪದ ತೀರ್ಥ ಪ್ರಸಾದಗಳನ್ನು ಉಂಡವರೇ. ಈ ಸೇವೆಗಳಿಂದ ಕೃತಾರ್ಥರಾದವರು ಜನರ ಧ್ವನಿಯನ್ನು ಕೇಳುತ್ತಿಲ್ಲ.

ಕರಾವಳಿಯವರೇ ಆದ ಡಿ.ವಿ. ಸದಾನಂದ ಗೌಡರು ಮುಖ್ಯ ಮಂತ್ರಿಗಳಾಗಿರುವ ಈ ಸಂದರ್ಭದಲ್ಲಾದರೂ ಮಂಗಳೂರ ಜನತೆಯ ಬವಣೆ ನೀಗುವಂತಾಗಲಿ. ಮಂಗಳೂರಿನಲ್ಲಿ ಸರ್ಕಾರಿ ಸಿಟಿ ಬಸ್‌ಗಳು ಓಡಾಡುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.