ADVERTISEMENT

ಮರಗಳ ಹನನ ನಿಲ್ಲಿಸಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ರಾಷ್ಟ್ರೀಯ ಉದ್ಯಾನವನ-ಹುಲಿಯ ಅಭಯಾರಣ್ಯ ರಮಣೀಯ ತಂಪಾದ ಗಿರಿಶಿಖರಾ ಒಂದೆರಡಲ್ಲ. ಪ್ರವಾಸಿಗರ ಮನಸೆಳೆಯುವ ಮನಮೋಹಕ ದೃಶ್ಯಾವಳಿಯ ಬಂಡೀಪುರದ ಮಡಿಲಲ್ಲೇ ನೂರಾರು ಮರಗಳ ಹನನಾ! ಅದೂ ದೂರದ ಬೆಂಗಳೂರಿನ ನಿವೃತ್ತ ಯೋಧನೊಬ್ಬನ ಕೈವಾಡ!! ಎಂತಹ ವಿಪರ್ಯಾಸ!!!

ಜಮೀನು ಮಂಜೂರಾಗಲು ಮುನ್ನವೇ ಕಟ್ಟಡದ ಅಡಿಪಾಯ? ಬಲು ರೋಚಕವಾಗಿದೆ ಪ್ರಸಂಗ ಎಷ್ಟಾದರೂ ಆತನೊಬ್ಬ ನಿವೃತ್ತ ಯೋಧನಂತೆ! ಇಷ್ಟಾದರೂ ಸಾಹಸ ತೋರದಿದ್ದರೆ ಆತ ದೇಶಕ್ಕಾಗಿ ಹೋರಾಡಿ ಫಲವೇನು?

ಬಳ್ಳಾರಿಯ ಬೆಟ್ಟ ಗುಡ್ಡಗಳು ಕರಗಿದಂತೆ ರಾಜ್ಯದ ಕಾಡುಗಳೂ ನಾಶವಾಗುತ್ತಿರುವುದು ಯಾವುದರ ಸಂಕೇತ? ಕರ್ನಾಟಕವು ಭ್ರಷ್ಟಾಚಾರದತ್ತ ದಾಪುಗಾಲಿಟ್ಟು `ಭಸ್ಮಾಸುರ~ನ ಅಪರಾವತಾರವಾಗುತ್ತಿದೆ. `ತ್ರಿವೇಣಿ~ ಸಂಗಮಗಳು ಕಲುಷಿತಗೊಂಡು ರೋಗದ ಆಗರವಾಗುತ್ತಿರುವಂತೆ ಈ `ಚತುರ್ಮುಖ ಬ್ರಹ್ಮರು~ ಸೇರುವಲ್ಲಿ ರಾಷ್ಟ್ರದ ಸಂಪತ್ತು ಲೂಟಿಯಾಗುವುದು ಸಾಬೀತಾದ ಸತ್ಯವೇ ಆಗಿದೆ.

`ಬೇಲಿಯೇ ಎದ್ದು ಹೊಲ ಮೇಯ್ದಾಗ ಕಾಯುವವರ‌್ಯಾರು ಕಟ್ಟುವವರ‌್ಯಾರು?~ಎಂಬಂತಾಗಿದೆ ನಮ್ಮ ರಾಷ್ಟ್ರೀಯ ಸಂಪತ್ತಿನ ಸ್ಥಿತಿಗತಿ! ಬೇರೆಯವರನ್ನು ನಮ್ಮ ರಕ್ಷಣೆಗೆ ಮೊರೆಯಿಡದೆ ನಮ್ಮದನ್ನು ನಾವು ರಕ್ಷಿಸಿಕೊಳ್ಳುವತ್ತ ಗಮನಹರಿಸಿದಾಗ ಮಾತ್ರ ನಮ್ಮ ನೆಲೆಯ ಉಳಿವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.