ADVERTISEMENT

‘ಮಹಿಳಾ ನೀತಿ’ ಎಲ್ಲಿ?

ಎಂ.ವಿಜಯ್, ಬೆಂಗಳೂರು
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಮಹಿಳಾ ನೀತಿ’ ಯನ್ನು 2015ರಲ್ಲಿ ಸಿದ್ಧಪಡಿಸಿ, ಅದನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿ, ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತು. ಇದನ್ನು ಎಷ್ಟು ಜನರು ಗಮನಿಸಿ, ಸಲಹೆಗಳನ್ನು ನೀಡಿದರು ಎಂಬುದು ಇಲಾಖೆಯ ಕಡತಗಳಲ್ಲಿ ಅಡಗಿಕೊಂಡು ಕುಳಿತಿದೆ. ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಇಲ್ಲ.

ಈ ‘ಮಹಿಳಾ ನೀತಿ’ಯ ಪ್ರಕಟಣೆ ಎಂದು ಎಂಬ ಪ್ರಶ್ನೆಯನ್ನು ಇಲಾಖೆಯ ಅಧಿಕಾರಿಗಳಿಗೆ ಹಾಕಿದರೆ, ‘ಇನ್ನೂ ಕ್ಯಾಬಿನೆಟ್ ಮುಂದೆ ಹೋಗಬೇಕಿದೆ; ಅಲ್ಲಿ ಒಪ್ಪಿಗೆ ಪಡೆಯಬೇಕಿದೆ’ ಎಂಬ ಉತ್ತರ ಬಂದಿದೆ. ಇದಾದ ಬಳಿಕ, ಈ ನೀತಿಯು ವಿಧಾನ ಮಂಡಲದ ಎರಡೂ ಸದನಗಳಲ್ಲಿ ಮಂಡನೆಯಾಗಿ, ಒಪ್ಪಿಗೆಯಾಗಿ, ಮತ್ತೆ ಇಲಾಖೆಗೆ ಬಂದು, ನಂತರ ಅದರ ಅನುಷ್ಠಾನ ಕುರಿತು ದಾರಿಯನ್ನು ಸುಗಮಗೊಳಿಸಬೇಕಿದೆ.

ಇಷ್ಟೆಲ್ಲಾ ಆಗುವವರೆಗೆ ಈ ಸರ್ಕಾರ ಇದ್ದೀತೆ? ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ತುಸುವೇ ಕಡಿಮೆ ಇರುವ ಮಹಿಳೆಯರ ವಿಷಯದಲ್ಲಿ ಸರ್ಕಾರದ ಕಾಳಜಿ ಇಷ್ಟಿದೆ; ಮಹಿಳಾ ಮತ್ತು ಮಕ್ಕಳ ಸಚಿವರಿಗೆ ಏನು ಸರ್ಟಿಫಿಕೇಟ್ ಕೊಡೋಣ? ನೀತಿಯನ್ನು ಪ್ರಕಟಿಸುವ ಕೆಲಸವನ್ನು ಪ್ರಾರಂಭಿಸಿದ್ದೇ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ. ನೀತಿಯ ಕರಡು ಪ್ರತಿ ಸಿದ್ಧವಾದ ಬಳಿಕ ಅದನ್ನು ಫ್ರಿಜ್‍ನಲ್ಲಿ ಇಟ್ಟು ಇನ್ನೆರಡೂವರೆ ವರ್ಷವನ್ನು ಕಳೆದುಬಿಟ್ಟಿತಲ್ಲ ಈ ಸರ್ಕಾರ?

ADVERTISEMENT

ಇಂಥ ವಿಷಯದಲ್ಲಿ ಪಟ್ಟು ಹಿಡಿದು, ಸಚಿವರನ್ನು ಪ್ರಶ್ನಿಸಿ, ‘ಮಹಿಳಾ ನೀತಿ’ಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹಿಳಾ ಅಥವಾ ಮಹಿಳಾಪರ ಸಂಘಟನೆಗಳಾದರೂ ಕೆಲಸ ಮಾಡಿದ್ದರೆ, ಅವರಿಗೆ ಭೇಷ್ ಎನ್ನಬಹುದಿತ್ತು, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.