ADVERTISEMENT

ಮಾಗಡಿ ರಸ್ತೆ:ಅಪೂರ್ಣ ಕಾಮಗಾರಿ, ಸಾರ್ವಜನಿಕರ ಪರದಾಟ

ಎಂ.ಉಮಾಶಂಕರ ಬಾಬು
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST
ಮಾಗಡಿ ರಸ್ತೆ:ಅಪೂರ್ಣ ಕಾಮಗಾರಿ, ಸಾರ್ವಜನಿಕರ ಪರದಾಟ
ಮಾಗಡಿ ರಸ್ತೆ:ಅಪೂರ್ಣ ಕಾಮಗಾರಿ, ಸಾರ್ವಜನಿಕರ ಪರದಾಟ   

ಬೆಂಗಳೂರು ನಗರ, ಗಾಂಧಿನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವ ಮಾಗಡಿ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಳ್ಳಕೊಳ್ಳಗಳಿಂದ ಕೂಡಿದೆ, ಇದರಿಂದಾಗಿ ವಾಹನ ಸವಾರರು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸಬೇಕಾಗಿದೆ. ಮೂರು ವರ್ಷಗಳ ಹಿಂದೆ ಆರಂಭಗೊಂಡ ಮೆಟ್ರೋ ಕಾಮಗಾರಿಯಿಂದಾಗಿ ಈ ರಸ್ತೆ ಸಂಪೂರ್ಣ ಹಾಳಾಗಿದೆ.

ಮೆಟ್ರೋ ಕಾಮಗಾರಿಯು ಕೆಳ ಮತ್ತು ಮೇಲ್ಭಾಗದಲ್ಲಿ ಮುಗಿದಿದೆ, ಆದರೂ ಮೆಟ್ರೋದವರಾಗಲೀ, ಪಾಲಿಕೆಯವರಾಗಲೀ ಇತ್ತ ಗಮನಹರಿಸುತ್ತಿಲ್ಲ. ಪ್ರತಿಷ್ಠಿತರು ವಾಸಿಸುವ/ಸಂಚರಿಸುವ ಮಾರ್ಗಗಳಲ್ಲಿ ತಕ್ಷಣ ಸ್ಪಂದಿಸುವ ಇವರು ಇತ್ತ ಏಕೆ ಗಮನಹರಿಸುತ್ತಿಲ್ಲ. ಸ್ಥಳೀಯ ವ್ಯಾಪಾರಸ್ಥರು, ನಾಗರಿಕರ ಹೋರಾಟದ ಫಲವಾಗಿ ನಾಲ್ಕು ತಿಂಗಳ ಹಿಂದೆ ರಸ್ತೆ ಸರಿಪಡಿಸುವ ಕೆಲಸ ಪ್ರಾರಂಭವಾಯಿತು. ಇದಕ್ಕಾಗಿ ಮಾಗಡಿ ಮುಖ್ಯರಸ್ತೆಯನ್ನು ಏಕಮುಖ ಸಂಚಾರಕ್ಕೆ ಒಳಪಡಿಸಲಾಯಿತು. ಕೆಲ ದಿನಗಳು ಕುಂಟುತ್ತ ಸಾಗುತ್ತಿದ್ದ ಕಾಮಗಾರಿ ಇದ್ದಕ್ಕಿದ್ದಂತೆ ಹಾಗೇ ಬಿಡಲಾಗಿದೆ.

ಲೋಡ್‌ಗಟ್ಟಲೆ ಜಲ್ಲಿಯನ್ನು ರಸ್ತೆಯ ಮಧ್ಯೆ ಹಾಗೇ ಬಿಡಲಾಗಿದೆ. ಸಾಲದೆಂಬಂತೆ ಅಕಾಲಿಕ ಮಳೆಯಿಂದಾಗಿ ಈ ರಸ್ತೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಮತ್ತು ದೂಳಿನಿಂದ ಕೂಡಿರುತ್ತದೆ. ಇದರಿಂದಾಗಿ ಹಿರಿಯ ನಾಗರಿಕರು, ಶಾಲಾ/ಕಾಲೇಜುಗಳ ಮಕ್ಕಳು, ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗೂ ಇಎಸ್‌ಐ, ಮಹಾಲಕ್ಷ್ಮೀ ಲೇಔಟ್, ಯಶವಂತಪುರಕ್ಕೆ ಹೋಗುವ, ಬರುವ ಬಿಎಂಟಿಸಿ ಬಸ್ಸುಗಳ ದ್ವಿಮುಖ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮತ್ತು ವಾಹನ ಸವಾರರಿಗೆ ಸುತ್ತಿಬಳಸಿ ಬರುವುದು ದೊಡ್ಡ ಸಮಸ್ಯೆಯಾಗಿದೆ.

ಸ್ಥಳೀಯ ಶಾಸಕರು ಈಗ ಮಂತ್ರಿಗಳಾಗಿರುವುದರಿಂದ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆಂದು ನಂಬೋಣವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.