ADVERTISEMENT

ಮುಖ್ಯಮಂತ್ರಿಗಳ ಮಠ ವ್ಯಾಮೋಹ!

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 19:30 IST
Last Updated 13 ಮಾರ್ಚ್ 2011, 19:30 IST

‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಹಣೆಬರಹ ಹೊತ್ತು ನಿಂತಿರುವ ‘ವಿಧಾನಸೌಧ’ದಲ್ಲಿ ಕುಳಿತು ಇನ್ನೂ ಎರಡು ವರ್ಷ ಅಧಿಕಾರ ಚಲಾಯಿಸುವ ‘ಹಟ’ ತೊಟ್ಟಿರುವ ಸಿ.ಎಂ. ಯಡಿಯೂರಪ್ಪನವರ ‘ಮಠ ವ್ಯಾಮೋಹ’ ಮಾತ್ರ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದೆ.

 ಪ್ರತ್ಯೇಕ ‘ಕೃಷಿ ಬಜೆಟ್’ ಮಂಡಿಸಿ ಇತಿಹಾಸ ಸೃಷ್ಟಿಸಿರುವ ಅವರು ಮುಂದಿನ ವರ್ಷ ‘ಪ್ರತ್ಯೇಕ ಮಠ’ ಬಜೆಟ್ ಮಂಡಿಸಿ ‘ಸ್ವಾಮಿ’ಗಳ ಸಲಹೆ, ಆಶೀರ್ವಾದ ಪಡೆದು, ‘ಮಠ ಮಾನ್ಯಗಳ ಅಭಿವೃದ್ಧಿ ಆಡಳಿತ’ ನಡೆಸುತ್ತ ಯಥೇಚ್ಛ ‘ಪುಣ್ಯ’ ಸಂಪಾದಿಸಿ ಬಹುಕಾಲದವರೆಗೆ ರಾಜ್ಯವನ್ನಾಳುವ ‘ದೂರದೃಷ್ಟಿ’ಯನ್ನು ಹೊಂದಿರಬಹುದು!

ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯನ್ನು ಮಠಗಳಿಗೆ ವಹಿಸಿಕೊಡುವ ‘ಅದ್ಭುತ’ ಆಲೋಚನೆ ಹಾಸ್ಯಾಸ್ಪದವಷ್ಟೇ ಅಲ್ಲ ಹೊಣೆಗೇಡಿತನದ್ದೆಂಬ ‘ಜ್ಞಾನೋದಯ ಮುಖ್ಯಮಂತ್ರಿಗಳಿ’ಗೆ ಆಗದಿದ್ದರೆ ‘ಸೇವೆ’ಯ ಹೆಸರಿನಲ್ಲಿ ‘ಸುಲಿಗೆ’ ತಪ್ಪಿದ್ದಲ್ಲ!

ಸಂಪುಟ ದರ್ಜೆಯ ಒಬ್ಬ ಸಚಿವ, ಇಲಾಖೆಯ ಉನ್ನತಾಧಿಕಾರಿಗಳು ಸಾಕಷ್ಟು ಸಿಬ್ಬಂದಿ ಹೊಂದಿರುವ ಆರೋಗ್ಯ ಇಲಾಖೆ ಇರುವುದಾದರೂ ಯಾವ ಪುರುಷಾರ್ಥಕ್ಕೆ? ಇಲಾಖೆಯಲ್ಲಿರುವ ಅವ್ಯವಸ್ಥೆ, ಭ್ರಷ್ಟಾಚಾರ, ವೈದ್ಯರು, ಸಿಬ್ಬಂದಿಯ ಕರ್ತವ್ಯಭ್ರಷ್ಟತೆ, ಸೌಲಭ್ಯಗಳ ಕೊರತೆ ಕುರಿತು ಸಚಿವರೇ ಎಷ್ಟೋ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮಕೃಷ್ಣ ಹೆಗಡೆಯವರು ಮಂತ್ರಿಯಾಗಿದ್ದಾಗ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಭೇಟಿ ಕೊಟ್ಟು ಬಂದ ನಂತರ ‘ಅದೊಂದು ಸಾಕ್ಷಾತ್ ನರಕ’ ಎಂದು ಉದ್ಗರಿಸಿದ್ದರು! ಈಗಿನ ಪರಿಸ್ಥಿತಿ ಇನ್ನೂ ಘೋರ!

ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯನ್ನು ಮಠಗಳಿಗೆ ವಹಿಸಿಕೊಟ್ಟರೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಬೊಕ್ಕಸದ ಹಣ ಹಾಗೂ ಜನರ ಆರೋಗ್ಯ ಎರಡಕ್ಕೂ ಸಂಚಕಾರ ಬರುತ್ತದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ನಿಜವಾದ ಬದ್ಧತೆ, ಅನುಭವ, ಜನಪರ ಕಾಳಜಿ ಇಲ್ಲದ ಮಠಗಳಿಗೆ ಕೋಟಿ ಕೋಟಿ ಅನುದಾನ ನೀಡುವುದಾಗಲಿ, ಆರೋಗ್ಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಡುವುದಾಗಲಿ ಔಚಿತ್ಯ ಮೀರಿದ ಕ್ರಮ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.