ADVERTISEMENT

ಮುಸ್ಲಿಂ ಸಂಘಟನೆಗಳ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಂಘಟನೆಗಳು ಸಾಮಾಜಿಕ ನ್ಯಾಯ,ಸಮಾನತೆ, ಸಬಲೀಕರಣ, ಜನರ ಕೈಗೆ ಅಧಿಕಾರ ಮುಂತಾದ ಘೋಷಣೆಗಳ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಜನರಲ್ಲಿ ರಾಜಕೀಯ ಸಂಚಲನೆ ಉಂಟು ಮಾಡುತ್ತಿವೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಗೌರವ ಗಳಿಸಿಕೊಡುವುದು ಹೇಗೆಂಬ ಬಗ್ಗೆ ಚಿಂತನೆ ನಡೆಸುವುದು ನ್ಯಾಯಬದ್ಧವಾಗಿದೆ. ಆದರೆ ಇದರಿಂದ ಆಗುತ್ತಿರುವುದೇನು?

ಮಠಾಧೀಶರು ರಾಜ್ಯದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇದೀಗ ಮಸೀದಿಗಳ ಇಮಾಮರು, ಕೆಲವು ಮೌಲವಿಗಳು ಮತ್ತು ತಂಙಳ್‌ಗಳು ದಿಢೀರನೆ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಧಾರ್ಮಿಕ ಕರ್ತವ್ಯ-ಉತ್ತರದಾಯಿತ್ವಗಳ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕೋಮು ದ್ವೇಷದಿಂದ ನಲುಗಿದ ಪ್ರದೇಶಗಳಲ್ಲಿ ಕೆಲವು ಮುಸ್ಲಿಂ ಉಲಮಾಗಳು ಕೋಮು ಆಧಾರದಲ್ಲಿ ರಾಜಕೀಯ ಧ್ರುವೀಕರಣವನ್ನು ಬೆಂಬಲಿಸುವುದು ಸಮುದಾಯದ  ಹಿತದೃಷ್ಟಿಯಿಂದ ಅಪಾಯಕಾರಿ.

ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳೇ ಸಾಕಷ್ಟಿವೆ. ಅವನ್ನೆಲ್ಲ ಬಿಟ್ಟು ಒಂದು ರಾಜಕೀಯ ಪಕ್ಷದ ಮುಖವಾಣಿಯಂತೆ ಅವರು ಗುರುತಿಸಿಕೊಳ್ಳುವುದು ಅವರಿಗೆ ಶೋಭೆ ತರುವುದಿಲ್ಲ.

ಮುಸ್ಲಿಮರು ವಿಭಿನ್ನ ಪಕ್ಷ-ಸಿದ್ಧಾಂತಗಳನ್ನು ಬೆಂಬಲಿಸುವವರಾದರೂ ಧರ್ಮ ಗುರುವಿನ ವಿಚಾರದಲ್ಲಿ ಅವರಿಗೆ ಪೂರ್ವಗ್ರಹಗಳಿರುವುದಿಲ್ಲ. ಅದೇ ರೀತಿ ಧರ್ಮ ಗುರು ಜಮಾಅತರೆಲ್ಲರನ್ನೂ ಸಮಾನವಾಗಿ ಕಾಣಬೇಕು. ಸಮುದಾಯಕ್ಕೆ ಧಾರ್ಮಿಕ ನಾಯಕತ್ವ ನೀಡಬೇಕಾದ ಉಲಮಾಗಳು ಸಕ್ರಿಯ ರಾಜಕೀಯದಲ್ಲಿ ತೊಡಗುವುದು ಸರಿಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.