ಒಂದು ವರ್ಷದ ಕೆಳಗೆ ಸಾಂಸ್ಕೃತಿಕ ಕ್ಷೇತ್ರದ ಅನುದಾನಕ್ಕೆ ಸಂಬಂಧಿಸಿದ ದಿಢೀರ್ ಬದಲಾವಣೆಗಳ ಬಗ್ಗೆ ಚರ್ಚೆ ನಡೆದಿತ್ತು. ಕಾಕತಾಳೀಯವೋ, ಕಲಾವಿದರ ಒತ್ತಾಯವೋ ಅಂತೂ ಹಿಂದಿನ ವರ್ಷದ ವೇತನ ಅನುದಾನ ತಕ್ಷಣ ಬಿಡುಗಡೆಯೂ ಆಗಿಬಿಟ್ಟಿತು. ಕಲಾವಿದರೆಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಕಾದು, ಕಾದು ವರ್ಷ ಕಳೆದರೂ ಬೇರೆ ಯಾವ ಸಾಂಸ್ಕೃತಿಕ ಅನುದಾನವೂ ಬಿಡುಗಡೆಯಾಗದೆ, ಸಭೆಯೂ ನಡೆಯದೆ ಆತಂಕಪಡುವ ಸ್ಥಿತಿ ಮತ್ತೆ ನಿರ್ಮಾಣವಾಗಿದೆ.
ಕೇಂದ್ರದ ಸಾಂಸ್ಕೃತಿಕ ನಿರ್ದೇಶನಾಲಯದಲ್ಲಿ ವಿಕೇಂದ್ರೀಕರಣ ಕೈಗೊಂಡು ಸಾಂಸ್ಕೃತಿಕ ಯೋಜನೆಗಳನ್ನು ಬೇರೆ ಬೇರೆ ಸರ್ಕಾರಿ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಇವುಗಳಲ್ಲಿ ಅಲಹಾಬಾದ್‌ನಲ್ಲಿನ ಸಂಸ್ಥೆಯೊಂದೇ ಮಾರ್ಚ್ ಮಾಹೆಯ ಸಭಾ ವರದಿ ಬಿಡುಗಡೆ ಮಾಡಿದೆ. ಅದು ಬಿಟ್ಟರೆ, ಉಳಿದ ಸಂಸ್ಥೆಗಳು ನಡೆಸುತ್ತಿರುವ ಕಾರ್ಯದ ಬಗ್ಗೆ ದೂರವಾಣಿ ಮೂಲಕ ಕರೆ ಮಾಡಿದರಾಗಲಿ, ಅಂತರ್ಜಾಲ ತಾಣದಲ್ಲಾಗಲಿ ಯಾವುದೇ ಮಾಹಿತಿ ಇಲ್ಲ.
ಇನ್ನು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಕಾರ್ಯದ ಪಾರದರ್ಶಕತೆಯನ್ನು ಹೆಚ್ಚಿಸಲು ಈ ವರ್ಷದಿಂದ ಆನ್‌ಲೈನ್ ಅರ್ಜಿಯನ್ನು ಆರಂಭಿಸಿದೆ. ಅದರ ಬಗೆಗೆ ಮಾಹಿತಿ ಸಮರ್ಪಕವಾಗಿಲ್ಲ. ಉದಾಹರಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರವೂ ಯಾವ ದಾಖಲೆಗಳನ್ನು ಕಳುಹಿಸಬೇಕು ಎಂಬ ಅಂಶಕ್ಕೆ ಪ್ರಕಟವಾಗಿರುವ ಸೂಚನೆ ಒಂದಾದರೆ, ಇಲಾಖೆಗೆ ಕರೆ ಮಾಡಿದಾಗ ಸಿಗುವ ಉತ್ತರವೇ ಬೇರೆ.
ಹೆಚ್ಚಿನವರು ‘ರಿಸ್ಕ್ ಬೇಡ’ ಎಂದು ಆನ್‌ಲೈನ್ ಮುಖಾಂತರ ಸಲ್ಲಿಸಿರುವ ದಾಖಲೆಗಳೆಲ್ಲವನ್ನೂ ಮತ್ತೆ ಪ್ರಿಂಟ್ ತೆಗೆದು ಇಲಾಖೆಗೆ ಕಳುಹಿಸುತ್ತಿದ್ದಾರೆ! ಒಟ್ಟಿನಲ್ಲಿ ಈ ಬಾರಿಯೂ ಕೇಂದ್ರ-ರಾಜ್ಯ ಎರಡರ ಕಡೆಯಿಂದಲೂ ಸಾಂಸ್ಕೃತಿಕ ಅನುದಾನ ಸಂಘ-ಸಂಸ್ಥೆಗಳಿಗೆ, ಅರ್ಹ ವ್ಯಕ್ತಿಗಳಿಗೆ ಸಿಗುವ ಸಮಯವೇನಿದ್ದರೂ ಅಕ್ಟೋಬರ್ ನಂತರವೇ. ಹಣ ಕೈಗೆ ಬರುವಾಗ (ಅಂದರೆ ನೇರವಾಗಿ ಬ್ಯಾಂಕಿಗೆ ಬರುವಾಗ) 2015 ಮುಗಿದು, 2016ರ ಮಾರ್ಚ್ ಸಮೀಪಿಸಿರುತ್ತದೆ! ಕಾರ್ಯಕ್ರಮವನ್ನು ಹೇಗೋ ಅವಸರದಲ್ಲಿ ಮಾಡಿ ಮುಗಿಸುವ ಅಥವಾ ಈ ಅನುದಾನವನ್ನು ನೆಚ್ಚದೆ ತಮ್ಮದೇ ಹಣದಿಂದ /ಇತರ ದಾನಿಗಳನ್ನು ಹೇಗೋ ಕಾಡಿ-ಬೇಡಿ ತರುವ ಹಣದಿಂದ 2015-16ರ ಸಾಂಸ್ಕೃತಿಕ ಚಟುವಟಿಕೆ ಮುಗಿಯುತ್ತದೆ!
ಕಲೆ ಬೇಕಾದದ್ದು ಕೇವಲ ಕಲಾವಿದನಿಗೆ ಮಾತ್ರವೆ? ಸಮಾಜಕ್ಕಾಗಲಿ, ಸರ್ಕಾರಕ್ಕಾಗಲಿ ಕಲೆಯ ಬಗೆಗೆ ಇರಬೇಕಾದ ಜವಾಬ್ದಾರಿ ಏನು? ಈಗಾಗಲೇ ವೃತ್ತಿಪರ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ.`ಬರೀ ಹಾಡಿದರೆ/ ನೃತ್ಯ ಮಾಡಿದರೆ ಜೀವನಕ್ಕೆ ಕಷ್ಟ ಎಂಬ ಮಾತು ಕಲಾರಂಗದಲ್ಲಿ ಇಂದು ಸಾಮಾನ್ಯ.
ಸರ್ಕಾರಗಳ ಧೋರಣೆ ಭಾರತೀಯ ಸಂಸ್ಕೃತಿಯನ್ನು ನಿಜವಾಗಿ ಎತ್ತಿ ಹಿಡಿಯುವ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಲಲಿತಕಲೆಗಳ ನಿರ್ಲಕ್ಷ್ಯವೆಂದೇ ಭಾವಿಸಬೇಕಾಗುತ್ತದೆ. ಹಾಗಾಗದೆ, ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿ ಕಲಾಪೋಷಣೆಯ ಹೊಣೆಯನ್ನು ಕಲಾವಿದನಿಗಷ್ಟೇ ಹೊರಿಸದೆ, ಸಮಾಜ- ಸರ್ಕಾರಗಳೆರಡೂ ಹಂಚಿಕೊಳ್ಳುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.