ADVERTISEMENT

ರಾಜ್ಯಪಾಲರು ಕರ್ತವ್ಯ ಪಾಲಿಸಿದ್ದು ತಪ್ಪೆ?

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 16:25 IST
Last Updated 17 ಫೆಬ್ರುವರಿ 2011, 16:25 IST

ಹಿರಿಯ ಸಂಶೋಧಕ ಚಿದಾನಂದಮೂರ್ತಿ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಲು ಶಿಫಾರಸು ಮಾಡಿದ್ದು ಅದನ್ನು ತಾತ್ಕಾಲಿಕವಾಗಿ ತಡೆಹಿಡಿದ ರಾಜ್ಯಪಾಲರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದದ್ದು ಆಶ್ಚರ್ಯ ತಂದಿದೆ. ಏಕೆಂದರೆ ಚಿದಾನಂದಮೂರ್ತಿ ಅವರು ರಾಜ್ಯದಲ್ಲಿ ಈಗಲೂ ಮತಾಂತರ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಆ ಮೂಲಕ ಮತಾಂತರವನ್ನು ವಿರೋಧಿಸಲು ಚರ್ಚ್ ಮೇಲೆ ದಾಳಿ ನಡೆದರೆ ತಪ್ಪಲ್ಲ ಎಂಬ ಧ್ವನಿ ಅವರ ಮಾತಿನಲ್ಲಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದು ಸಹಜವಾಗಿಯೆ ಇದೆ.

ಗೌರವ ಡಾಕ್ಟರೇಟ್ ಶಿಫಾರಸು ಮಾಡುವುದು ವಿಶ್ವವಿದ್ಯಾಲಯ. ಅದನ್ನು ಪರಿಶೀಲಿಸಿ ಒಪ್ಪಿಗೆ ನೀಡುವುದು ರಾಜ್ಯಪಾಲರ ಕೆಲಸ. ಹೀಗೆ ಪರಿಶೀಲಿಸಿ ಅನುಮತಿ ನೀಡುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಿದ ಮೇಲೆ ಅವರ ಕರ್ತವ್ಯ ಪಾಲನೆಯನ್ನೆ ವಿರೋಧಿಸಿದರೆ ವಿರೋಧಿಸುವವರು ಅಪರಾಧಿಗಳಾಗುತ್ತಾರೆ ವಿನಾ ರಾಜ್ಯಪಾಲರಲ್ಲ.

ರಾಜ್ಯಪಾಲರು ತಮ್ಮ ಕಾನೂನುಬದ್ಧ ಅಧಿಕಾರವನ್ನು ಚಲಾಯಿಸಿರುವುದು ಸ್ಪಷ್ಟವಾಗಿದೆ. ಯಾವುದೇ ಫಲಾನುಭವಿಯ ನಡೆ-ನುಡಿಯಲ್ಲಿ ಸಕಾರಣವಾಗಿ ಅನುಮಾನ ಉಂಟಾದರೆ ತಾತ್ಕಾಲಿಕವಾಗಿ ಪದವಿಯನ್ನು ಅಥವಾ ಗೌರವವನ್ನು ತಡೆ ಹಿಡಿಯುವುದು ಅನಿವಾರ್ಯ. ಇಂತಹ ಸಂವಿಧಾನಿಕವಾದ ರಾಜ್ಯಪಾಲರ ನಡೆಯೆ ತಪ್ಪು ಎನ್ನುವಂತೆ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಸ್ವೀಕರಿಸಿರುವುದು ಎಷ್ಟು ಸರಿ? ಈ ನಿರ್ಣಯ ಚಿ.ಮೂ ಅವರ ವಿದ್ವತ್ತಿನ ಬಗ್ಗೆ ನೀಡಿದ ಗೌರವಕ್ಕೆ ಸೀಮಿತವಾಗಿದ್ದು ರಾಜ್ಯಪಾಲರ ಕರ್ತವ್ಯಪಾಲನೆಗೆ ವಿರೋಧ ಸೂಚಿಸುವುದಕ್ಕೆ ಅಲ್ಲ ಎಂಬುದು ಸ್ಪಷ್ಟವಾಗಬೇಕು.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.