ADVERTISEMENT

ರಾಮಮಂದಿರ: ಸಂವಿಧಾನವಿರೋಧಿ ಧೋರಣೆ

ಡಾ.ಮ.ನ.ಜವರಯ್ಯ, ಮೈಸೂರು
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಮುಂಬರುವ 2014ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮೊದಲಾದ ಕೆಲವು ಬಿಜೆಪಿ ರಾಜಕಾರಣಿಗಳು, ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತೆ ರಾಮನಗುಡಿ ವಿವಾದ ಎಬ್ಬಿಸುತ್ತಿರುವುದು ಇಡೀ ದೇಶದ ಪ್ರಜ್ಞಾವಂತ ಮತದಾರರು ಯೋಚಿಸಬೇಕಾದಂಥ ವಿಚಾರ.

ಬಿಜೆಪಿ ನಾಯಕರು ಮೇಲಿಂದ ಮೇಲೆ ಎತ್ತುತ್ತಿರುವ ಈ ರಾಮ ದೇವಾಲಯ ವಿವಾದದ ಆತ್ಮದೊಳಗೆ ಅಡಗಿರುವುದು ಮೂಲತಃ ಕೋಮುದಂಗೆ. ರಾಮನಗುಡಿ ಹೆಸರಿನಲ್ಲಿ ಕೋಮುದಂಗೆ ಎಬ್ಬಿಸಿ, ಅದರಿಂದ ರಾಜಕೀಯ ಲಾಭ ಪಡೆಯುವುದೇ ಅವರ ಏಕೈಕ ಉದ್ದೇಶ. ರಾಮನಗುಡಿ ವಿವಾದವೇ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಂದು ಕಾಂಗ್ರೆಸ್ ನಾಯಕರಾದ ದಿಗ್ವಿಜಯ್‌ಸಿಂಗ್‌ರವರೇ ಹೇಳಬೇಕಾಗಿಲ್ಲ.

ಆ ಸಂಗತಿಯನ್ನು ಇಡೀ ದೇಶವೇ ಮನಗಂಡಿದೆ. ರಾಮನನ್ನು ಪೂಜಿಸುವ ಹಕ್ಕು ರಾಮನ ಭಕ್ತರಿಗೆ ಇದ್ದೇ ಇದೆ. ಸಂವಿಧಾನದತ್ತವಾದ ಆ ಹಕ್ಕನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ, ಅದನ್ನೊಂದು ರಾಜಕೀಯ ಬಂಡವಾಳವನ್ನಾಗಿ ಪರಿವರ್ತಿಸುತ್ತಿರುವ ಬಿಜೆಪಿಯ ಕೆಲವು ರಾಜಕಾರಣಿಗಳ ಆಲೋಚನೆ, ಕೇವಲ ಸಮಾಜವಿರೋಧಿ ಮಾತ್ರವಲ್ಲ, ಅದೊಂದು ಸಂವಿಧಾನವಿರೋಧಿ ಧೋರಣೆಯೂ ಆಗಿದೆ. ಹಾಗಾಗಿ, ಅಯೋಧ್ಯೆಯ ರಾಮನಗುಡಿಯಂಥ  ವಿವಾದಾಸ್ಪದವಾದ ವಿಷಯ, ಯಾವುದೇ ರಾಜಕೀಯ ಪಕ್ಷ ಪ್ರಣಾಳಿಕೆ ಆಗುವುದು ಸಹನೀಯ ಸಂಗತಿಯಲ್ಲ.

ಪ್ರಾಯಶಃ ಈ ವಿಷಯದಲ್ಲಿ ಚುನಾವಣಾ ಆಯೋಗವೇ ಆಕ್ಷೇಪ ಎತ್ತಬೇಕು; ಅಥವಾ, ನ್ಯಾಯಾಂಗವೇ ಮಧ್ಯ ಪ್ರವೇಶಿಸಿ, ರಾಮನ ಗುಡಿಯಂಥ ವಿವಾದಾಸ್ಪದ ವಿಷಯವನ್ನು, ಯಾವ ರಾಜಕೀಯ ಪಕ್ಷವೂ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬಾರದೆಂದು, ಸೂಕ್ತ ಆದೇಶ ನೀಡುವುದೇ ಸಾಕಷ್ಟು ಪರಿಣಾಮಕಾರಿ ನಿಲುವು ಎಂದೆನಿಸುತ್ತದೆ.
-ಡಾ. ಮ. ನ. ಜವರಯ್ಯ, ಮೈಸೂರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.