ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೆದ್ದ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ, ಬಿಜೆಪಿಯೊಂದಿಗೆ ಪೈಪೋಟಿಗಿಳಿದು 1 ರೂಪಾಯಿಗೆ ಕೆಜಿಯಂತೆ 30 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದರು. ಅಗ್ಗದ ದರದಲ್ಲಿ ಅಕ್ಕಿ ಕೊಡುವುದಕ್ಕೆ ಭತ್ತ ಬೆಳೆಯುವವರ ವಿರೋಧ ಇಲ್ಲ.
1 ಕೆಜಿ ಅಕ್ಕಿ ಬೆಳೆಯಲು ಕನಿಷ್ಠ 30 ರೂ. ಬೇಕು. ಅಕ್ಕಿ ಮಾರುಕಟ್ಟೆಯಲ್ಲಿ ಕೆಜಿಗೆ 18ರಿಂದ 20ರೂಗೆ ಸಿಗುತ್ತದೆ. ಅಂದರೆ ಭತ್ತ ಬೆಳೆಯುವ ರೈತ ಅರ್ಧಕ್ಕರ್ಧ ನಷ್ಟದಲ್ಲಿದ್ದಾನೆ. ಇದೇ ರೀತಿ ನಷ್ಟದಲ್ಲಿ ಎಷ್ಟು ದಿನ ಭತ್ತ ಬೆಳೆಯಲು ಸಾಧ್ಯ? ಈಗಾಗಲೇ ಭತ್ತ ಬೆಳೆಯುವ ಗದ್ದೆಗಳೆಲ್ಲಾ ಕೃಷಿಯೇತರ ಉದ್ದೇಶಕ್ಕೆ ಅಕೇಶಿಯ ನೆಡು ತೋಪುಗಳಿಗೆ ಬಳಕೆಯಾಗುತ್ತಿದೆ.
ಎರಡು ಮಕ್ಕಳ ಸಂಸಾರಕ್ಕೆ ಹೆಚ್ಚೆಂದರೆ 15-20ಕೆಜಿ ಅಕ್ಕಿ ಸಾಕು. ಅಂತಹುದರಲ್ಲಿ 30ಕೆಜಿ ಅಕ್ಕಿ ಕೊಡುತ್ತಾರೆ. ಅವರಲ್ಲಿ ಹೆಚ್ಚಿನವರು 10ಕೆಜಿಯನ್ನು ಅಗ್ಗಕ್ಕೆ ಅಂಗಡಿಗಳಿಗೆ ಮಾರುತ್ತಾರೆ. ಅದರಿಂದ ಅಕ್ಕಿ ಬೆಲೆ ಇನ್ನಷ್ಟು ಕಡಿಮೆ ಆಗುತ್ತಿದೆ.ಇದೆಲ್ಲದರ ಪೆಟ್ಟು ಭತ್ತ ಬೆಳೆಯುವ ರೈತನಿಗೆ ಆಗುತ್ತದೆ.
ಸರ್ಕಾರ ಭತ್ತ ಕೊಳ್ಳುವವರಿಂದ ಅರ್ಧಬೆಲೆಗೆ ಲೆವಿ ಹಾಕಿಸಿಕೊಳ್ಳುತ್ತದೆ. ಈ ಎಲ್ಲದರಿಂದ ರೈತರಿಗೆ ಭತ್ತ ಬೆಳೆಯುವುದರಿಂದ ವಿಮುಕ್ತಿ ಹೊಂದುವುದು ಅನಿವಾರ್ಯ. ಮುಂದಿನ ದಿನಗಳಲ್ಲಿ ಭತ್ತದ ಉತ್ಪಾದನೆ ಮೇಲೆ ತೀವ್ರ ಪರಿಣಾಮವಾಗಿ ದುಡ್ಡು ಕೊಟ್ಟರೂ ಅಕ್ಕಿ ಸಿಗದೆ ಹೋಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.