ADVERTISEMENT

ಲಯ ತಪ್ಪುತ್ತಿರುವ ರಾಷ್ಟ್ರಗೀತೆ!

ಎಂ.ಅಬ್ದುಲ್ ರೆಹಮಾನ್ ಪಾಷ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST

ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಕ್ಕೆ ಮುಂಚೆ ರಾಷ್ಟ್ರಗೀತೆಯನ್ನು ಹಾಕುವುದು ಸುಪ್ರೀಂ ಕೋರ್ಟ್‌ ಆದೇಶವೊಂದರ ಪ್ರಕಾರ ಕಡ್ಡಾಯವಲ್ಲ; ಆದರೆ ನಿಷೇಧವೂ ಅಲ್ಲವಲ್ಲ. ಹೀಗಾಗಿ ಇದೀಗ ನಡೆಯುತ್ತಿರುವ 10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ನಡೆಯುವ 12 ಚಿತ್ರಮಂದಿರಗಳಲ್ಲಿ ದಿನದ ಐದೂ ಪ್ರದರ್ಶನಗಳ ಮುಂಚೆ ತೆರೆಯ ಮೇಲೆ ಸ್ಲೋಮೋಷನ್‍ನಲ್ಲಿ ರಾಷ್ಟ್ರಧ್ವಜ ಕಾಣಿಸುತ್ತಿರುವಾಗ ಧ್ವನಿಯಲ್ಲಿ ರಾಷ್ಟ್ರಗೀತೆ ಕೇಳಿಸುತ್ತದೆ, ನಾವೆಲ್ಲಾ ಎದ್ದು ನಿಂತು ಗೌರವ ಸಲ್ಲಿಸುತ್ತಿದ್ದೇವೆ.

ಆದರೆ ಇಲ್ಲಿರುವ ರಾಷ್ಟ್ರಗೀತೆಯ ಅವತರಣಿಕೆ ಬಗ್ಗೆ ನನ್ನದೊಂದು ಆಕ್ಷೇಪವಿದೆ. ರಾಷ್ಟ್ರಗೀತೆಯ ಧ್ವನಿಮುದ್ರಿಕೆಯನ್ನು ಕೇಳಿಸಿಕೊಳ್ಳುತ್ತಾ ನಾವೆಲ್ಲಾ ಶ್ರದ್ಧಾಂಜಲಿ ಅರ್ಪಿಸುವವರ ಹಾಗೆ ತಲೆ ತಗ್ಗಿಸಿ ಮೌನವಾಗಿ ನಿಲ್ಲುವುದಲ್ಲ, ನಿಂತಿದ್ದರೂ ಮೊಬೈಲ್‍ ಅನ್ನು ನೋಡುತ್ತಿರುವುದಲ್ಲ ಪದ್ಧತಿ. ತಲೆ ಎತ್ತಿ ನಿಂತು ಸ್ವತಃ ನಾವೇ ರಾಷ್ಟ್ರಗೀತೆಯನ್ನು ಅಭಿಮಾನದಿಂದ ಹಾಡಬೇಕು.

ನಮ್ಮ ಧ್ವನಿ ಎಷ್ಟು ಮಧುರವಾಗಿದೆ ಎಂಬುದು ಮುಖ್ಯವಲ್ಲ. ರಾಷ್ಟ್ರಗೀತೆಯ ಇಡೀ ಗಾಯನದಲ್ಲಿ ನಾನೂ ಮತ್ತು ನನ್ನ ಧ್ವನಿಯೂ ಇರುತ್ತದೆ ಎನ್ನುವುದು ಮುಖ್ಯ. ಆದರೆ ಈಗಿನ ಸಿನಿಮೋತ್ಸವದಲ್ಲಿನ ಗೀತೆಯ ಅವತರಣಿಕೆಯಲ್ಲಿ ಒಂದು ಸಾಲು ಹೆಣ್ಣುಧ್ವನಿ, ಇನ್ನೊಂದು ಸಾಲು ಗಂಡುಧ್ವನಿ ಹಾಡುತ್ತದೆ. ಇದೇನು ಡುಯೆಟ್ ಸಾಂಗೇ ಹೀಗೆ ಹಂಚಿಕೊಂಡು ಹಾಡಲು?

ADVERTISEMENT

ಹೋಗಲಿ ಎಂದು, ನಾನು ಗೀತೆಯನ್ನು ಸಾಕಷ್ಟು ದೊಡ್ಡ ಧ್ವನಿಯಲ್ಲಿ ಸೀದಾ ಸಾದಾ ಹಾಡಲು ನೋಡುವಾಗ, ... ಉಚ್ಛಲ ಜಲಧಿತರಂ...ಗ, ತವಶುಭ ಆಶಿಶಮಾ...ಗೆ; ಗಾಹೇ...ತವ ಜಯಗಾಥಾ... ಎಂಬಂಥ ಸಾಲುಗಳಲ್ಲಿ ಹೆಣ್ಣು ಧ್ವನಿ ಹೆಚ್ಚಿನ ಸಂಗತಿಯನ್ನು ಹಾಕಿ ಎಳೆದು ಹಾಡುತ್ತಾರೆ.

ಇದು ನಾವೆಲ್ಲಾ ಹಾಡುವ ಲಯಕ್ಕೆ ಭಂಗ ತರುತ್ತದೆ. ಕೆಲ ಕ್ಷಣ ಬಿಟ್ಟು ಹಾಡಿನೊಂದಿಗೆ ಸೇರಿಕೊಳ್ಳಬೇಕಾಗಿ ಬರುತ್ತದೆ. ಇಂಥ ಅವತರಣಿಕೆಯನ್ನು ಏಕೆ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿಕೊಂಡು ಮುಂದಿನ ಸಲ ನೋಡುವಾಗ ಅದಕ್ಕೊಂದು ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರವೂ ಇರುವುದು ಕಂಡು ಆಶ್ವರ್ಯವಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.