ADVERTISEMENT

ವರ್ಗಾವಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ಸಾರ್ವಜನಿಕ ಶಿಕ್ಷಣ ಇಲಾಖೆಯ 251 ಕ್ಷೇತ್ರ ಶಿಕ್ಷಣ ಅಧಿಕಾರಿಗಳ (ಬಿಇಒ) ವರ್ಗಾವಣೆಗೆ ಮುಖ್ಯಮಂತ್ರಿ ತಡೆ ನೀಡಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಜುಲೈ 18). ಈ ವರ್ಗಾವಣೆಗೆ ಕೆಲ ಶಾಸಕರು ಸಹ ಆಕ್ಷೇಪ ವ್ಯಕ್ತಪಡಿಸಿ, ವರ್ಗಾವಣೆ ನಿಯಮಬಾಹಿರ ಎಂದು ಆರೋಪಿಸಿದ್ದಾರೆ.

ಮೇಲ್ನೋಟಕ್ಕೆ ಇದು ಒಂದು ಕಾನೂನಿನ ಸಮಸ್ಯೆಯಂತೆ ಕಂಡುಬಂದರೂ, ಹಿನ್ನೆಲೆಯನ್ನು ಕೆದಕುತ್ತ ಹೋದರೆ ರಾಜಕಾರಣಿಗಳು–ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿಯ ಅಸ್ಥಿಪಂಜರಗಳು ಹೊರಬೀಳುತ್ತವೆ.

ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂಬ ಕಳಕಳಿಯುಳ್ಳ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು, ಮೊದಲ ಹೆಜ್ಜೆಯಾಗಿ ಬಿಇಒಗಳನ್ನು ಜಿಲ್ಲಾ ತರಬೇತಿ ಕೇಂದ್ರಕ್ಕೆ (ಡಯಟ್) ವರ್ಗಾವಣೆ ಮಾಡಿ, ಅಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರನ್ನು ಬಿಇಒ ಹುದ್ದೆಗೆ ವರ್ಗಾವಣೆ ಮಾಡಲು ತೀರ್ಮಾನಿಸಿದ್ದರು.

ADVERTISEMENT

ತಮ್ಮ ಹುದ್ದೆಗಳಲ್ಲಿ ಬೇರು ಬಿಟ್ಟ ಅನೇಕ ಶಿಕ್ಷಣ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ಮಾಡಲಿಲ್ಲ. ಖಾಸಗಿ ಶಾಲೆಗಳ ಲಾಬಿಗೆ ಮಣಿದ ಕೆಲವು ಅಧಿಕಾರಿಗಳು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಪ್ರಯತ್ನ ಮಾಡಿದ ಮುಖ್ಯಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರನ್ನು ಬೆದರಿಸಿದ ಉದಾಹರಣೆಯೂ ಇದೆ.

ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಹೊಸ ಅಧಿಕಾರಿಗಳ ತಂಡದ ಅವಶ್ಯಕತೆ ಇದೆ. ಈ ಹುದ್ದೆಗೆ ಅರ್ಹರನ್ನು ನೇಮಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಜವಾಬ್ದಾರಿ ಮುಖ್ಯಮಂತ್ರಿ ಹೆಗಲ ಮೇಲಿದೆ.
-ಬಿ. ಶ್ರೀಪಾದ ಭಟ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.