ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 18 ಏಪ್ರಿಲ್ 2024, 19:45 IST
Last Updated 18 ಏಪ್ರಿಲ್ 2024, 19:45 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಸೋಲೊಪ್ಪಿತೇ ಆಧುನಿಕ ವಿಜ್ಞಾನ?

ಅಯೋಧ್ಯೆಯಲ್ಲಿ ರಾಮನವಮಿ ದಿನ ಬಾಲರಾಮನ ಹಣೆಗೆ ಸೂರ್ಯ ತಿಲಕವಾಗಿದ್ದು ಸಂತೋಷದ ಸಂಗತಿ. ಗರ್ಭಗುಡಿಯಲ್ಲಿರುವ ಶ್ರೀರಾಮನಿಗೆ ಲೋಕಸಂಚಾರಿ ಸೂರ್ಯನ ದರ್ಶನ ಒಂದು ಅದ್ಭುತ ಅನುಭವವೇ ಸರಿ.ಆದರೆ ಮಸೂರಗಳು ಮತ್ತು ಕನ್ನಡಿಗಳನ್ನು ಬಳಸಿ ಯಾಂತ್ರಿಕ ವ್ಯವಸ್ಥೆಯ ಮೂಲಕ ಶ್ರೀರಾಮನಿಗೆ ಸೂರ್ಯಕಿರಣ ಸ್ಪರ್ಶ ಮಾಡಿಸಿದ್ದನ್ನು ನೋಡಿದರೆ, ಆಧುನಿಕ ಖಗೋಳಶಾಸ್ತ್ರವು ನಮ್ಮ ಪುರಾತನ ಖಗೋಳಶಾಸ್ತ್ರಜ್ಞರ ಮುಂದೆ ತಲೆಬಾಗಿತೇನೋ ಅನಿಸುತ್ತಿದೆ.

ADVERTISEMENT

ಯಾಕೆಂದರೆ, ಯುಗಾದಿ, ಸಂಕ್ರಾಂತಿಯಂತಹ ವಿಶೇಷ ದಿನಗಳಂದು ನಮ್ಮ ಕೆಲವು ಪುರಾತನ ಮಂದಿರಗಳ ಮೂಲ ವಿಗ್ರಹಗಳ ಮೇಲೆ ನೇರವಾಗಿ ಸೂರ್ಯಕಿರಣ ಸ್ಪರ್ಶವಾಗುವುದನ್ನು ನಾವು ಗಮನಿಸಬಹುದು. ಆದರೆ ಈಗ ನಮ್ಮ ವಿಜ್ಞಾನಿಗಳು ಕೃತಕ ವ್ಯವಸ್ಥೆಯ ಮೂಲಕ ಇದನ್ನು ಸಾಧ್ಯವಾಗಿಸಿದ್ದಾರೆ. ಹಾಗಿದ್ದರೆ ನಮ್ಮ ಪಾರಂಪರಿಕ ಪುರಾತನ ಜ್ಞಾನದ ಮುಂದೆ ಆಧುನಿಕ ವಿಜ್ಞಾನ ಸೋಲೊಪ್ಪಿತೇ? ಸೂರ್ಯನ ಚಲನೆ, ದಿಕ್ಕು, ಸಮಯ ಹಾಗೂ ಸ್ಥಳವನ್ನು ಕರಾರುವಾಕ್ಕಾಗಿ ಅಭ್ಯಸಿಸಿ, ನೇರವಾಗಿ ಸೂರ್ಯಕಿರಣ ಸ್ಪರ್ಶಿಸುವ ರೀತಿಯಲ್ಲಿ ಮಂದಿರವನ್ನು ವಿನ್ಯಾಸ
ಮಾಡಬಹುದಿತ್ತೇನೊ

⇒ವೀರೇಶ ಬಂಗಾರಶೆಟ್ಟರ, ಕುಷ್ಟಗಿ

ಹೆಚ್ಚಬೇಕಿದೆ ಕನ್ನಡಿಗರ ಪ್ರಾತಿನಿಧ್ಯ

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಉತ್ತರ ಭಾರತದ ರಾಜ್ಯಗಳು, ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡುವುದರಲ್ಲಿ ಕರ್ನಾಟಕದ ಪ್ರಾತಿನಿಧ್ಯ ಕಡಿಮೆಯೇ ಇದೆ. ಇದಲ್ಲದೆ, ಕೇಂದ್ರ ಸರ್ಕಾರದಲ್ಲಿ ಕರ್ನಾಟಕ ಮೂಲದ ಅಖಿಲ ಭಾರತ ಸೇವೆಯ ಅಧಿಕಾರಿಗಳ ಪ್ರಾತಿನಿಧ್ಯವೂ ಅಷ್ಟಾಗಿ ಇಲ್ಲ. ಕೇಂದ್ರ ಸರ್ಕಾರದ ಇಲಾಖೆಗಳ ವಿವಿಧ ಸ್ತರದ ಹುದ್ದೆಗಳಿಗೆ ಕರ್ನಾಟಕದಿಂದ ನೇಮಕವಾಗುವವರ ಸಂಖ್ಯೆಯೂ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆಯೇ ಇದೆ. ಈ ದಿಸೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲಿಚ್ಛಿಸುವ ಆಕಾಂಕ್ಷಿಗಳಿಗೆ ಪೋಷಕರು ಬಹಳಷ್ಟು ಉತ್ತೇಜನ ನೀಡಬೇಕಾಗಿದೆ.

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲಾಡಳಿತವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಅನುಕೂಲ ಆಗಲೆಂದು ನಗರ ಕೇಂದ್ರ ಗ್ರಂಥಾಲಯವು ಮಧ್ಯರಾತ್ರಿ ಹನ್ನೆರಡರವರೆಗೂ ಕಾರ್ಯನಿರ್ವಹಿಸಲು ಅನುವಾಗಿಸಿದ್ದನ್ನು
ಕೇಳಿದ್ದೇವೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯಗಳಲ್ಲೂ ಇದೇ ರೀತಿ ಸಮಯವನ್ನು ವಿಸ್ತರಿಸಬೇಕು. ಇಂತಹ ನಡೆಯಿಂದ ಐಎಎಸ್‌, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. →⇒ಪ್ರಸಾದ್‌ ಜಿ.ಎಂ., ಮೈಸೂರು

ನೀರಿನ ದುರ್ಬಳಕೆ: ಹಳ್ಳಿಗಳೂ ಕಡಿಮೆಯಿಲ್ಲ

ರಾಜ್ಯದಾದ್ಯಂತ ಇರುವ ನೀರಿನ ಅಭಾವದ ಪರಿಸ್ಥಿತಿಯನ್ನು ವಿವರಿಸಿರುವ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರು (ವಾ.ವಾ., ಏ. 18), ಶ್ರೀಮಂತರು ಹಾಗೂ ಅಧಿಕಾರಿಗಳು ತಮ್ಮ ಹಣಬಲ ಹಾಗೂ ಅಧಿಕಾರದ ಬಲದಿಂದ ನೀರನ್ನು ಪೋಲು ಮಾಡುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದು ನಗರ ಪ್ರದೇಶಗಳಲ್ಲಿ ನಡೆಯುವ ನೀರಿನ ದುರ್ಬಳಕೆಯಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಇರುವ ಅದರ ಇನ್ನೊಂದು ಮುಖವೂ ಅನಾವರಣಗೊಳ್ಳ
ಬೇಕಾಗಿದೆ! ರೈತರು ತಮ್ಮ ಅಡಿಕೆ ತೋಟ ಮತ್ತು ಜಮೀನುಗಳಿಗೆ ಸಮೀಪದ ಹೊಳೆ, ಹಳ್ಳ, ನದಿಯಂತಹ ನೀರಿನ ಮೂಲಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರಿಗೆ ಒಂದೊಂದು ನೀರೆತ್ತುವ ಪಂಪ್‌ಸೆಟ್‌ಗಳನ್ನು
ಅಳವಡಿಸಿರುತ್ತಾರೆ. ಈ ಮೂಲಕ ಅನವಶ್ಯಕವಾಗಿ ನೀರು ಹಾಯಿಸುವ ಪರಿಪಾಟವನ್ನು ನಾವು ನೋಡುತ್ತಿದ್ದೇವೆ. ಇದರಿಂದ ಸದಾಕಾಲ ನೀರು ಹರಿಯಬೇಕಾಗಿದ್ದ ನದಿಗಳೂ ಇಂದು ಬರಿದಾಗುತ್ತಿವೆ.

ಕುಡಿಯುವ ನೀರಿನ ಸಮಸ್ಯೆಯಿಂದ ಜನ–ಜಾನುವಾರುಗಳು ತತ್ತರಿಸಿ ಹೋಗುತ್ತಿರುವ ಪರಿಸ್ಥಿತಿಯಲ್ಲಿ, ಜಮೀನಿಗೆ ನೀರು ಹಾಯಿಸಲು ಇಟ್ಟಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ, ಆ ನದಿಯ ನೀರನ್ನು ಟ್ಯಾಂಕರ್ ಮೂಲಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವ ಕಡೆ ಮನೆ ಮನೆಗೆ ಒದಗಿಸಲು ಮುಂದಾಗಬೇಕು. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡುವ ಮೂಲಕ ಸರ್ಕಾರವು ಜನ– ಜಾನುವಾರುಗಳ ಜೀವ ರಕ್ಷಣೆಗೆ ಮುಂದಾಗಬೇಕಿದೆ.⇒ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ಏಕಪಕ್ಷದ ಸಾರ್ವಭೌಮತ್ವ ಅ‍ಪಾಯಕಾರಿ

‘ಮೋದಿ ಮತ್ತು ಸ್ವನಾಮಪ್ರೇಮ’ ಎಂಬ ಸುಧೀಂದ್ರ ಕುಲಕರ್ಣಿ ಅವರ ಲೇಖನ (ಪ್ರ.ವಾ., ಏ. 16) ಸಮಯೋಚಿತವಾಗಿತ್ತು.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವ ದೇಶದ ಏಕೈಕ ಪಕ್ಷ ಎಂದು ಬಿಂಬಿಸಿಕೊಳ್ಳುವ ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ‘ನಿಮ್ಮ ಮತವನ್ನು ನರೇಂದ್ರ ಮೋದಿಯವರ ಹೆಸರಿಗೆ ಚಲಾಯಿಸಿ’ ಎಂದು ಕೇಳುತ್ತಿರುವ ಪರಿಯನ್ನು ನೋಡಿದರೆ, ಆ ಪಕ್ಷವು ಏಕಪಾತ್ರಾಭಿನಯ ಮಾಡುವ ತಂಡದಂತೆ ಭಾಸವಾಗುತ್ತದೆ. ಹಾಗಿದ್ದರೆ ಉಳಿದೆಲ್ಲ ಕ್ಷೇತ್ರಗಳಿಗೆ ಆ ಪಕ್ಷದ ಅಭ್ಯರ್ಥಿಗಳು ಯಾಕೆ ಬೇಕು? ಒಬ್ಬ ವ್ಯಕ್ತಿಯೇ ಎಲ್ಲವನ್ನೂ ನಿಭಾಯಿಸಲು ಶಕ್ತನಾಗುವುದಾದರೆ ಇಷ್ಟೆಲ್ಲಾ ಖರ್ಚು ಮಾಡಿ ಚುನಾವಣೆ ನಡೆಸುವ ಜರೂರತ್ತಾದರೂ ಏನು ಎಂಬ ಪ್ರಶ್ನೆಗಳು ಮೂಡದೇ ಇರವು.

ಬಿಜೆಪಿಯ ಪ್ರಣಾಳಿಕೆ ಸಹ ಇದು ‘ಮೋದಿಯವರ ಗ್ಯಾರಂಟಿ’ ಎಂದು ಹೇಳುವ ಮೂಲಕ, ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಲ್ಲದ ಪಕ್ಷ ಎಂದು ಪರೋಕ್ಷವಾಗಿ ಘೋಷಿಸಿಕೊಳ್ಳುತ್ತಿರುವಂತೆ ಗೋಚರಿಸುತ್ತದೆ. ಸದೃಢ ಆಡಳಿತ ಪಕ್ಷವನ್ನು ಮಾತ್ರವಲ್ಲ ಸದೃಢ ಮತ್ತು ಸಕ್ರಿಯ ವಿರೋಧ ಪಕ್ಷವನ್ನು ಸಹ ಚುನಾಯಿಸಬೇಕು ಎಂಬುದನ್ನು ನಾವು ಮರೆಯಬಾರದು. ಆಗಮಾತ್ರ ಪ್ರಜಾಪ್ರಭುತ್ವ ಉಳಿದೀತು. ಅತಿಯಾದರೆ ಅಮೃತವೂ ವಿಷ ಎಂಬಂತೆ, ಅತ್ಯಧಿಕ ಸ್ಥಾನಗಳನ್ನು ಒಂದೇ ಪಕ್ಷಕ್ಕೆ ನೀಡುವುದು ಅತಂತ್ರ ಲೋಕಸಭೆಗಿಂತಲೂ ಘೋರ ಪರಿಣಾಮವನ್ನು ಉಂಟು ಮಾಡಬಹುದು.⇒ರವಿಚಂದ್ರ ಎಂ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.