ADVERTISEMENT

ಸಂಸ್ಕೃತವನ್ನು ಕಾಡುತ್ತಿರುವ ಜಾತಿ

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST

ರಾಜ್ಯದಲ್ಲಿ 3 ಸರ್ಕಾರಿ ಸಂಸ್ಕೃತ ಕಾಲೇಜುಗಳು 10 ಅನುದಾನಿತ ಸಂಸ್ಕೃತ ಕಾಲೇಜುಗಳು ಹೀಗೆ ಒಟ್ಟು 13 ಕಾಲೇಜುಗಳಿವೆ. ಇಲ್ಲಿ ಅಕ್ಷರಾಭ್ಯಾಸದಿಂದ ಪ್ರಾರಂಭವಾಗುವ ಪ್ರಥಮ ತರಗತಿಯಿಂದ ಹಿಡಿದು ವಿದ್ವತ್ ಉತ್ತಮ ತರಗತಿಯವರೆಗಿನ 13 ವರ್ಷಗಳ ತರಗತಿಗಳು ನಡೆಯುತ್ತವೆ. ಈ 13 ಕಾಲೇಜುಗಳಲ್ಲಿ ಅಂದಾಜು 113 ಉಪಾಧ್ಯಾಯರು ಕೆಲಸ ನಿರ್ವಹಿಸುತ್ತಿದ್ದಾರೆ, ಇದರಲ್ಲಿ 100 ಮಂದಿ ಬ್ರಾಹ್ಮಣ ವರ್ಗಕ್ಕೆ ಸೇರಿದವರಾಗಿದ್ದಾರೆ.

ಎಸ್.ಎಂ.ಎನ್.ಪಿ. ಸಂಸ್ಕೃತ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಸಂಸ್ಕೃತ ಕಾಲೇಜು ಬೆಂಗಳೂರು, ಲಕ್ಷ್ಮೀನರಸಿಂಹ ಸಂಸ್ಕೃತ ಕಾಲೇಜು ಜಮಖಂಡಿ, ಇವು ಮಾಧ್ವ ಬ್ರಾಹ್ಮಣರು ನಡೆಸುವ ಸಂಪೂರ್ಣ ಅನುದಾನಿತ ಕಾಲೇಜುಗಳು, ಆಡಳಿತ ಮಂಡಳಿ, ಉಪಾಧ್ಯಾಯವರ್ಗ ವಿದ್ಯಾರ್ಥಿವೃಂದ ಎಲ್ಲರೂ ಮಾಧ್ವ ಸಂಪ್ರದಾಯದವರು.

ಇಲ್ಲಿ ಸ್ಮಾರ್ತ ಮತ್ತು ಶ್ರಿ ವೈಷ್ಣವ ಬ್ರಾಹ್ಮಣರಿಗೆ ಪ್ರವೇಶಾವಕಾಶವಿಲ್ಲ. ಹಾಗೆಯೇ ಸಂಸ್ಕೃತ ಕಾಲೇಜು ಗೋಕರ್ಣ, ಸಂಸ್ಕೃತ ಕಾಲೇಜು ಸುಬ್ರಹ್ಮಣ್ಯ-ಹೊನ್ನಾವರ, ಸಂಸ್ಕೃತ ಕಾಲೇಜು ಉಮಚಗಿ, ಸಂಸ್ಕೃತ ಕಾಲೇಜು ಸ್ವರ್ಣವಲ್ಲಿಮಠ ಈ 4 ಕಾಲೇಜುಗಳು ಹವ್ಯಕ ಬ್ರಾಹ್ಮಣರು ನಡೆಸುವ ಕಾಲೇಜುಗಳು.
 
ಆಡಳಿತ ಮಂಡಳಿ ಉಪಾಧ್ಯಾಯ ವರ್ಗ, ವಿದ್ಯಾರ್ಥಿವೃಂದ ಎಲ್ಲರೂ ಹವ್ಯಕ ಬ್ರಾಹ್ಮಣ ಪಂಗಡಕ್ಕೆ ಸೇರಿದವರು, ಇಲ್ಲಿ ಮಾಧ್ವ ಹಾಗೂ ಶ್ರಿ ವೈಷ್ಣವ ಬ್ರಾಹ್ಮಣರಿಗೆ ಇಲ್ಲಿ ಅವಕಾಶವಿಲ್ಲ. ಹೀಗೆ ಬ್ರಾಹ್ಮಣರಲ್ಲಿಯೇ ಈ ಅಸ್ಪೃಶ್ಯತೆ ಇರುವಾಗ ಬ್ರಾಹ್ಮಣೇತರರಿಗೆ ಸಹಪಂಕ್ತಿ ಇಲ್ಲವೆ ಪಾಠಪ್ರವಚನ ಸಿಗುವುದು ಸಾಧ್ಯವೆ?

ಮೇಲುಕೋಟೆ ಸಂಸ್ಕೃತ ಕಾಲೇಜು ಇದಕ್ಕೆ ಭಿನ್ನವಾಗಿಲ್ಲ. ಬ್ರಾಹ್ಮಣೇತರಿಗೆ ಪ್ರವೇಶ ನಿಷಿದ್ಧ. ಜಾತಿ ಆಧಾರಿತ ಸ್ತಂಭದ ಮೇಲೆ ಸ್ಥಾಪಿತವಾಗಿರುವ ಈ ಕಾಲೇಜುಗಳಿಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸಂಪೂರ್ಣ ಅನುದಾನ ನೀಡುತ್ತಿರುವುದು ಆಶ್ಚರ್ಯದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.