ADVERTISEMENT

ಸಮತೋಲನದ ಕೊರತೆ

ಎಸ್.ನಾಗವೇಣಿ, ಬೆಂಗಳೂರು
Published 28 ಫೆಬ್ರುವರಿ 2018, 19:36 IST
Last Updated 28 ಫೆಬ್ರುವರಿ 2018, 19:36 IST

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಹತ್ತನೇ ವರ್ಷವೂ ಯಶಸ್ವಿಯಾಗಿ ನಡೆದಿದೆ. ಪ್ರತಿ ಪ್ರದರ್ಶನದ ಆರಂಭದಲ್ಲಿ ಪ್ರದರ್ಶಿಸಲಾಗುವ ಚಿಕ್ಕ ‘ಸಿಗ್ನೇಚರ್ ಸಿನಿಮಾ’ ಎಲ್ಲರ ಗಮನ ಸೆಳೆದಿದೆ. ಇದನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು, ಸಿನಿಮೋತ್ಸವದ ನಿರ್ದೇಶಕರೂ ಆದ ರಾಜೇಂದ್ರಸಿಂಗ್ ಬಾಬು ಅವರೇ ಪರಿಕಲ್ಪಿಸಿ, ನಿರ್ದೇಶಿಸಿದ್ದಾರೆ. ಆದರೆ ಇದರ ದೃಶ್ಯವಿನ್ಯಾಸದಲ್ಲಿ ಆಗಿರುವ ಕೆಲವು ನ್ಯೂನತೆಗಳನ್ನು ಮುಂದಿನ ಸಲವಾದರೂ ಸರಿಪಡಿಸಿಕೊಳ್ಳುವುದು ಒಳ್ಳೆಯದು.

ಈ ಕಿರು ವಿಡಿಯೊದಲ್ಲಿ ರಾಜ್ಯದ ವಿವಿಧ ಪ್ರದೇಶಗಳನ್ನು ಅಲ್ಲಿನ ಪ್ರಸಿದ್ಧ ಸ್ಮಾರಕಗಳ ಮೂಲಕ ಪ್ರತಿನಿಧಿಸಿರುವುದು ಒಳ್ಳೆಯ ಉಪಾಯ. ಆದರೆ ರೋಬೊಟ್ ಸೃಷ್ಟಿಸಿದ ಗಂಡಭೇರುಂಡ ಯಂತ್ರಹಕ್ಕಿ ಆಗಸಕ್ಕೆ ಜಿಗಿದ ನಂತರ ಅದು ಕರ್ನಾಟಕವನ್ನು ಕಾಣಲು ಶುರು ಮಾಡುವುದು ಹಂಪಿಯ ಕಲ್ಲಿನ ರಥದ ನಂತರದಿಂದಲೇ. ಎಂದರೆ ಬೀದರ್, ಗುಲ್ಬರ್ಗ, ಬೆಳಗಾವಿ, ಧಾರವಾಡ ಇತ್ಯಾದಿ ಪ್ರದೇಶಗಳ ಐತಿಹಾಸಿಕ ಕೋಟೆಗಳು, ದೊಡ್ಡ ಮಸೀದಿಗಳು, ಕ್ವಾಜ ಬಂದೇ ನವಾಜ್ ದರ್ಗಾ, ಗೋಲ್‍ಗುಂಬಜ್‌, ಬಾರಾಕಮಾನ್, ಬಾದಾಮಿ ಐಹೊಳೆಯ ಗವಿಗಳು, ಪ್ರಾಚೀನ ದೇಗುಲಗಳು, ಕರ್ನಾಟಕ ವಿಶ್ವವಿದ್ಯಾಲಯ, ಕರಾವಳಿಯ ಯಕ್ಷಗಾನ ಇತ್ಯಾದಿಗಳಲ್ಲಿ ಒಂದೆರಡನ್ನಾದರೂ ಬಳಸಬಹುದಾಗಿತ್ತು. ಮೈಸೂರು ಪಟ್ಟಣವೊಂದನ್ನೇ ಪ್ರತಿನಿಧಿಸಲು ನಂದಿ, ಮಹಿಷಾಸುರ, ಅರಮನೆ, ಸಂತ ಫಿಲೊಮಿನಾ ಚರ್ಚ್‌ ಹೀಗೆ ನಾಲ್ಕು ಸ್ಮಾರಕಗಳನ್ನು ಬಳಸಿರುವ ನಿರ್ದೇಶಕರಿಗೆ ಉತ್ತರ ಕರ್ನಾಟಕದ ಇಮಾರತುಗಳಿಗೆ ಜಾಗದ ಕೊರತೆಯಾಗಿದ್ದು ವಿಪರ್ಯಾಸ.

ಅಲ್ಲದೆ, ಸಿನಿಮೋತ್ಸವ ನಡೆಯುತ್ತಿರುವುದು ಸರ್ಕಾರದ ನಿಧಿಯಿಂದ. ಆದ್ದರಿಂದ ಈ ಕಿರು ವಿಡಿಯೊದಲ್ಲಿ ಜಗತ್ತನ್ನು ಸುತ್ತಿ ಬೆಂಗಳೂರನ್ನು ತಲುಪಿದಾಗ ಜನತಂತ್ರದ ಶಕ್ತಿಕೇಂದ್ರವಾದ ವಿಧಾನ ಸೌಧದ ಮೇಲೆಯೂ ಹಾರಿ ಸಾಗಿದ್ದರೆ ಚೆನ್ನಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.