ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರು ‘ನಮ್ಮ ಮೆಟ್ರೊ’ ಬುಲೆವಾರ್ಡ್ ನೋಡಲು ತಮ್ಮ ಪತ್ನಿ ಸಮೇತ ಬಂದಾಗ ಈ ಮಾತನ್ನು ಆಡಿದರೆಂದು ತಮ್ಮ ಪತ್ರಿಕೆ ಪ್ರಧಾನವಾಗಿ ವರದಿ ಮಾಡಿದೆ (ಪ್ರ.ವಾ. 30.12.13). ‘ಅವಳ ಒಂದು ಕಣ್ಣು ಯಾವಾಗಲೂ ನನ್ನ ಮೇಲೇ ಇರುತ್ತೆ, ವಿಸ್ಕಿ ಜಾಸ್ತಿ ಹಾಕ್ಕೊಂಡ್ರೆ ಹೆಚ್ಚಾದ್ದನ್ನು ತಾನೇ ಕುಡಿದುಬಿಡುತ್ತಾಳೆ’. ಹಾಸ್ಯದ ಧ್ವನಿಯಲ್ಲಿ ಅವರು ಆಡಿದ ಮಾತು ನಗೆ ಬರಿಸಿದ್ದು ಸಹಜವೇ– ಆ ಮಾತನ್ನು ಕೇಳಿದ ಜನರು ನಕ್ಕುಬಿಟ್ಟರಂತೆ.
ಒಬ್ಬ ಪ್ರಸಿದ್ಧ ಸಾಹಿತಿ, ಅಂತಹ ಮಾತನ್ನಾಡುವಾಗ ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ. ಅವರ ಅಂತಹ ಮಾತು ವಿಸ್ಕಿ ಕುಡಿಯದೇ ಇರುವ ಯುವಕರಿಗೂ ಒಂದು ಪ್ರಚೋದನೆ ತರುವ ಸಾಧ್ಯತೆ ಖಂಡಿತ ಉಂಟು. ಅದರಲ್ಲೂ ಈಚಿನ ಯುವ ಪೀಳಿಗೆ ಅಂತಹ ಅಭ್ಯಾಸಗಳಿಗೆ ಮುಗಿ ಬೀಳುವುದು ಹೆಚ್ಚಾಗುತ್ತಿರುವಾಗ ಪ್ರಸಿದ್ಧ ಸಾಹಿತಿಗಳು ತಾವು ಆಡುವ ಮಾತಿನ ಬಗ್ಗೆ ಸಂಯಮ ವಹಿಸುವುದು ಅಗತ್ಯ.
ಅಷ್ಟೇ ಅಲ್ಲ, ಇತರ ಜನರಿಗೆ ಒಂದು ರೀತಿಯಲ್ಲಿ ಮಾದರಿಯಾಗುವ ಹಿರಿಯ ಸಾಹಿತಿಗಳು ಅಂತಹ ಮಾತನ್ನು ಆಡಲೂಬಾರದು. ಅಂತಹ ಕೆಟ್ಟ ಅಭ್ಯಾಸಗಳನ್ನು ಕೈಬಿಡಬೇಕೆಂದು ನಾನು ಸೂಚಿಸಬಯಸುತ್ತೇನೆ. ಸಾಮಾಜಿಕ ಜೀವನವನ್ನು ಒಂದು ರೀತಿಯಲ್ಲಿ ರೂಪಿಸುವ ಲೇಖಕರ ಹೊರ ನುಡಿಯಂತೆಯೇ ಒಳ ನಡೆಯೂ ಶುಭ್ರವಾಗಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.