ADVERTISEMENT

ಸಿಎಂ ಪತ್ರಕ್ಕೆ ಬೆಲೆಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಬಡ ರೋಗಿಗಳ ಚಿಕಿತ್ಸೆಯ ನೆರವಿಗಾಗಿ ನೀಡಿದ `ಸಿ.ಎಂ. ಭರವಸೆ ಪತ್ರಕ್ಕೂ ಸಿಗದ ಬೆಲೆ~ (ಫೆ.1) ವರದಿ ರಾಜ್ಯದಲ್ಲಿ ಆಳುವ ದೊರೆಗೂ ಬೆಲೆ ಇಲ್ಲ ಎಂಬುದನ್ನು ನಿರೂಪಿಸಿದೆ
 
ಕೇವಲ ಆಸ್ಪತ್ರೆ ಏಕೆ, ಜಿಲ್ಲಾಧಿಕಾರಿಗಳೂ ಮುಖ್ಯಮಂತ್ರಿ ಪತ್ರಕ್ಕೆ ಕ್ಯಾರೇ ಅನ್ನುವುದಿಲ್ಲ.
ಸರ್ಕಾರ ಕೆಂಗೇರಿ ಹೋಬಳಿ, ನಾಗದೇವನಹಳ್ಳಿ ಸರ್ವೆ ನಂ. 26ರ ಪೈಕಿ 25 ರಲ್ಲಿ ನನ್ನ ಹೆಸರಿನಲ್ಲಿ ಹಾಗೂ ಸ್ವಾಧೀನದಲ್ಲಿರುವ 20 ಗುಂಟೆ ಜಮೀನು ಮಾರಾಟಕ್ಕೆ ಪಿ.ಟಿ.ಸಿ.ಎಲ್. ಕಾಯಿದೆಯಡಿ ಅನುಮತಿ ನೀಡಿದೆ. ರಾಜ್ಯ ಹೈಕೋರ್ಟ್  ಒಂದು ತಿಂಗಳೊಳಗೆ `11ಇ~ ಸ್ಕೆಚ್ ನೀಡುವಂತೆ ಬೆಂಗಳೂರು ದಕ್ಷಿಣ ತಹಶೀಲ್ದಾರರಿಗೆ ಆದೇಶಿಸಿದ್ದರೂ ಅವರು ಪಾಲಿಸದಿದ್ದಾಗ, ಮುಖ್ಯಮಂತ್ರಿಗಳಿಗೇ ದೂರು ಕೊಟ್ಟೆ.
 
ಕಳೆದ ವರ್ಷ ಮೇ 24ರಂದು ಮುಖ್ಯಮಂತ್ರಿಗಳ ಕಾರ್ಯಾಲಯದಿಂದಲೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ (ಕ್ರಮಾಂಕ ನಂ. ಮುಮಕಾ-2966-2011) ಪತ್ರ ಬರೆದು ನ್ಯಾಯಾಲಯದ ಆದೇಶದಂತೆ `11ಇ~ ನಕ್ಷೆ ನೀಡುವ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಇದಕ್ಕೆ ಕ್ಯಾರೇ ಎಂದಿಲ್ಲ.

ಈ ಸರ್ಕಾರದಲ್ಲಿ ಸಚಿವರ, ಮುಖ್ಯಮಂತ್ರಿಗಳ ಪತ್ರಕ್ಕೆ ಅಧಿಕಾರಿಗಳು ಬೆಲೆ ಕೊಡುವುದಿಲ್ಲ. ಇನ್ನು ಶ್ರಿಸಾಮಾನ್ಯರ ಪತ್ರಕ್ಕೆ, ದೂರಿಗೆ ಬೆಲೆ ಕೊಡುತ್ತಾರೆಯೇ? ನಿಜಕ್ಕೂ ರಾಜ್ಯದಲ್ಲಿ ಸರ್ಕಾರ ಇದೆಯೇ? ಇದಕ್ಕೆ ಕಂದಾಯ ಸಚಿವರೂ ಆಗಿರುವ ಸಿ.ಎಂ. ಸಾಹೇಬರು ಉತ್ತರಿಸಬೇಕಷ್ಟೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.