ADVERTISEMENT

ಸ್ಪರ್ಧೆ– ಸಂಘರ್ಷ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST

ಚುನಾವಣೆಯ ಬಿಸಿ ಇನ್ನೇನು ತಣ್ಣಗಾಗುವ ಸಮಯ ಸಮೀಪಿಸುತ್ತಿದೆ. ‘ಈ ಕ್ಷೇತ್ರದಲ್ಲಿ ಮೂವರ ನಡುವೆ ಸ್ಪರ್ಧೆ... ಆ ಕ್ಷೇತ್ರದಲ್ಲಿ ಇವರೇ ಗೆಲ್ಲುತ್ತಾರೆ... ಇಂಥವರು ಸೋಲುತ್ತಾರೆ...’ ಇಂಥ ಮಾತುಗಳನ್ನು ಪದೇ ಪದೇ ಹೇಳುತ್ತಿದ್ದಾರೆ, ನಾವು ಕೇಳುತ್ತಿದ್ದೇವೆ. ಚುನಾವಣೆಯನ್ನು ಪಕ್ಷಗಳ ನಡುವಿನ ಮತ್ತು ಅಭ್ಯರ್ಥಿಗಳ ನಡುವಿನ ಸ್ಪರ್ಧೆ ಎಂದೇ ಬಿಂಬಿಸಲಾಗುತ್ತಿದೆ. ಫಲಿತಾಂಶದ ನಂತರ ಇವರು ಗೆದ್ದರು, ಇವರು ಸೋತರು ಎಂದೂ ಹೇಳುತ್ತಾರೆ.

ಈ ಇಡೀ ಸನ್ನಿವೇಶವನ್ನು ಮತದಾರರ ಜೊತೆ ನಿಂತು ಅರ್ಥ ಮಾಡಿಕೊಂಡಾಗ ಈ ವಾದಗಳೆಲ್ಲ ಸುಳ್ಳು ಎಂದು ಗೊತ್ತಾಗುತ್ತದೆ. ಯಾಕೆಂದರೆ, ನಿಜವಾಗಿ ಸ್ಪರ್ಧೆ ನಡೆಯುವುದು ಮತದಾರರು ಮತ್ತು ಅಭ್ಯರ್ಥಿಗಳ ನಡುವೆ. ಮತದಾರರಲ್ಲಿ ಶ್ರೀಮಂತರಿದ್ದಾರೆ, ಬಡವರೂ ಇದ್ದಾರೆ. ಶ್ರೀಮಂತರು ಕಡಿಮೆ, ಬಡವರು ಮತ್ತು ಮಹಿಳೆಯರು ಜಾಸ್ತಿ ಇದ್ದಾರೆ. ಇದಕ್ಕೆ ವಿರುದ್ಧವಾಗಿ ಅಭ್ಯರ್ಥಿಗಳಲ್ಲಿ ಬಡವರು ಮತ್ತು ಮಹಿಳೆಯರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಶ್ರೀಮಂತರು ಮತ್ತು ಪುರುಷರು. ಹಾಗಾಗಿ ಸ್ಪರ್ಧೆ ನಡೆಯುತ್ತಿರುವುದು ಮತದಾರರು ಮತ್ತು ಅಭ್ಯರ್ಥಿಗಳ ನಡುವೆ ಹಾಗೂ ಮಹಿಳೆಯರು ಮತ್ತು ಪುರುಷರ ನಡುವೆ. ವಾಸ್ತವವಾಗಿ ಇದು ಸ್ಪರ್ಧೆ ಅಲ್ಲ ‘ಸಂಘರ್ಷ’.

ಇನ್ನೂ ಖಚಿತವಾಗಿ ಹೇಳುವುದಾದರೆ ಬಹುಸಂಖ್ಯಾತ ಬಡ ಮತದಾರರು ಮತ್ತು ಶ್ರೀಮಂತ ಅಭ್ಯರ್ಥಿಗಳ ನಡುವೆ ನಡೆಯುವ ದಿನನಿತ್ಯದ ಸಂಘರ್ಷ. ಗೆದ್ದವರು ಅಧಿಕಾರ ಹಿಡಿಯುತ್ತಾರೆ, ಸೋತವರು ಅವರ ಜೊತೆ ಇರುತ್ತಾರೆ. ಬಡ ಮತದಾರರು ಮಾತ್ರ ಇವರಿಂದ ದೂರ ಇರುತ್ತಾರೆ ಅಥವಾ ಬಡ ಮತದಾರರನ್ನು ಅವರು ದೂರ ಇಡುತ್ತಾರೆ. ನಿರ್ಗತಿಕ ಹಾಗೂ ಬಡ ಮತದಾರರನ್ನು ಚುನಾವಣೆಯ ಸಂದರ್ಭದಲ್ಲಿ ಮಾತ್ರ ‘ಮತದಾರ ಪ್ರಭು’ ಎಂದು ಕರೆಯುವುದು ಎಂತಹ ವ್ಯಂಗ್ಯ! ಎಂತಹ ಮೋಸ!

ADVERTISEMENT

-ಡಾ. ಬಿ.ಎಂ. ಪುಟ್ಟಯ್ಯ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.