ADVERTISEMENT

ಹನುಮಂತಗೌಡರ ಹೈಟೆಕ್‌ ಶೌಚಾಲಯ..!

ಜೋಮನ್ ವರ್ಗಿಸ್
Published 23 ಡಿಸೆಂಬರ್ 2017, 19:30 IST
Last Updated 23 ಡಿಸೆಂಬರ್ 2017, 19:30 IST

ಗದಗ: ಬಿಜೆಪಿ ಪರಿವರ್ತನಾ ಯಾತ್ರೆ ಗದುಗಿಗೆ ಬಂದಿತ್ತು. ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ವರಿಷ್ಠರೆಲ್ಲರೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಅವರನ್ನೇ ಕೇಂದ್ರವಾಗಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಸಭಿಕರನ್ನು ಉದ್ದೇಶಿಸಿ ನಿಮಗೆ ಹನುಮಂತಗೌಡ್ರು ಕಂಡ ಹೈಟೆಕ್ ಶೌಚಾಲಯದ ಕನಸು ವಿವರಿಸುತ್ತೇನೆ ಎಂದರು.

‘ಹನುಮಂತಗೌಡ್ರು ಎಂದರೆ ಯಾರೆಂದು ಗೊತ್ತಾ’ ಎಂದು ಸಭಿಕರನ್ನು ಕೇಳಿದರು. ಸಭಿಕರು ‘ಗೊತ್ತು ಬಿಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ’ ಎಂದು ಚೀರಿದರು. ಇದರಿಂದ ಉತ್ತೇಜಿತರಾದ ಸವದಿ, ‘ಹನಮಂತಗೌಡ್ರು ಸದನದಲ್ಲಿ ಒಂದು ಮಾತು ಹೇಳಿದ್ದು ಈಗಲೂ ನೆನಪಿದೆ. ರಾಜ್ಯದ ಎಲ್ಲ ಹಳ್ಳಿಗಳ ಹೆಣ್ಣುಮಕ್ಕಳಿಗಾಗಿ ಹೈಟೆಕ್‌ ಶೌಚಾಲಯ ಕಟ್ಟಿಸ್ತೀನಿ ಎಂದಿದ್ದರು. ಅದು ಅಂತಿಂತ ಶೌಚಾಲಯ ಅಲ್ಲ. ವಿಮಾನದಲ್ಲಿ ಇರುವಂತ ಶೌಚಾಲಯ. ಮೊದಲು ಶವರ್‌ನಿಂದ ಬಿಸಿನೀರು ಬರುತ್ತದೆ, ನಂತರ ಶಾಂಪೂ ಬರುತ್ತದೆ ಎಂದು ತಾವು ಕಂಡ ಕನಸು ವಿವರಿಸಿದ್ದರು. ಈಗ ಎಲ್ಲಿದೆ ಅಂತಹ ಹೈಟೆಕ್‌ ಶೌಚಾಲಯ ಎಂದು ಪ್ರಶ್ನಿಸಿದರು. ನಂತರ ತಾವೇ, ಅದನ್ನು ರಾಜ್ಯದಲ್ಲಿ ಎಲ್ಲಿಯೂ ಕಟ್ಟದೇ ಹುಲಕೊಟಿಯ ತಮ್ಮ ಮನೆಯಲ್ಲಿ ನಿರ್ಮಿಸಿದ್ದಾರೆ’ ಎಂದು ಗೇಲಿ ಮಾಡಿದರು.

‘ಗೌಡ್ರೇ ಸುಮ್ನೆ ಗೌಡ್ಕಿ ಮಾಡಿಕೊಂಡು ಇರಿ. ಕೇಂದ್ರದ ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಎಲ್ಲ ಅಭಿವೃದ್ಧಿ ಕಾಮಗಾರಿಗಳೂ ನಿಮ್ಮದೇ ಸಾಧನೆ ಎನ್ನಬೇಡಿ. ಹಾದಿಯಲ್ಲಿ ಹೋಗುವ ಹುಡುಗನಿಗೆ ಇವನು ನನ್ನ ಮಗ ಎಂದರೆ, ಅವರಪ್ಪ ನಿಮ್ಮನ್ನು ಸುಮ್ಮನೆ ಬಿಡುತ್ತಾನೆಯೇ, ಎಂದು ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.