ADVERTISEMENT

ಹಳೆಯ ರೋಗ

ಡಿ.ಎಸ್.ನಾಗಭೂಷಣ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರ ವರುಣಾವನ್ನು ವೈದ್ಯವೃತ್ತಿಯಲ್ಲಿರುವ ತಮ್ಮ ಮಗನಿಗಾಗಿ ಬಿಟ್ಟುಕೊಟ್ಟು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿದ್ದಾರೆ. ಇದನ್ನು ಕಂಡ ಯಡಿಯೂರಪ್ಪ ತಮ್ಮ ಒಬ್ಬ ಮಗ ರಾಜಕೀಯದಲ್ಲಿರುವುದು ಸಾಲದೆಂಬಂತೆ ಇನ್ನೊಬ್ಬ ಮಗನನ್ನು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದು ನಮ್ಮ ಸಾಂಪ್ರದಾಯಿಕ ಪಕ್ಷಗಳಿಗೆ ಬಡಿದಿರುವ ಹಳೆಯ ರೋಗವೆಂದು ಬೈದುಕೊಂಡು ಅಸಹಾಯಕವಾಗಿ ಸುಮ್ಮನಾಗಬೇಕಾದ ಅನಿವಾರ್ಯ ಸಂದರ್ಭದಲ್ಲೇ ಈ ಕೆಟ್ಟ ರಾಜಕೀಯ ಸಂಸ್ಕೃತಿಗೆ ಪರ್ಯಾಯ ಒದಗಿಸುವುದಾಗಿ ಹೇಳಿಕೊಂಡು ಸ್ಥಾಪಿತವಾದ ‘ಸ್ವರಾಜ್ ಇಂಡಿಯಾ’ಕ್ಕೂ ಈ ರೋಗ ಹತ್ತಿರುವ ಸುದ್ದಿ ಬಂದಿದೆ. ಈ ಪಕ್ಷ ತಾನು ಗೆಲ್ಲಬಹುದಾದ ಏಕೈಕ ಕ್ಷೇತ್ರವೆಂದು ನಂಬಿರುವ ಮೇಲುಕೋಟೆಯಲ್ಲಿ ದಿವಂಗತ ಶಾಸಕ ಪುಟ್ಟಣ್ಣಯ್ಯನವರ ಮಗ ದರ್ಶನ್ ಪುಟ್ಟಣ್ಣಯ್ಯ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದೆ.

ಪ್ರಜಾತಾಂತ್ರಿಕ ಮೌಲ್ಯಗಳು ಅಪಾಯದಲ್ಲಿವೆ ಎಂದು ಹೇಳುತ್ತಾ ಅವನ್ನು ಸಂರಕ್ಷಿಸಲು ಹುಟ್ಟಿಕೊಂಡ ಪಕ್ಷವೆಂದು ಜನರನ್ನು ನಂಬಿಸತೊಡಗಿದ್ದ ಈ ಪಕ್ಷದ ನಾಯಕರಲ್ಲೊಬ್ಬರಾಗಿದ್ದ ಪುಟ್ಟಣ್ಣಯ್ಯ ಅಲ್ಲಿ ದಶಕಗಳ ಕಾಲ ಹೋರಾಟ-ರಾಜಕಾರಣ ಮಾಡಿಯೂ ತಮ್ಮ ಕ್ಷೇತ್ರದಲ್ಲಿ ತಮ್ಮ ಜಾಗವನ್ನು ತುಂಬಬಲ್ಲ ಒಬ್ಬ ಬದಲಿ ನಾಯಕನನ್ನು ಸೃಷ್ಟಿಸಲಾಗಲಿಲ್ಲ ಎಂದರೆ ಏನು ಹೇಳುವುದು? ಕೊನೆಗೆ ದುರ್ಬಲವಾಗತೊಡಗಿದ್ದ ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡೋ ಏನೋ ಕೆಲ ತಿಂಗಳ ಹಿಂದೆ ಅವರು ತಮ್ಮ ಮಗನನ್ನು ಅಮೆರಿಕದಿಂದ ಕರೆಸಿಕೊಂಡು ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನಾಗಿ ತಯಾರು ಮಾಡಿದ ಪರಿ ಮತ್ತು ಅದನ್ನು ನೋಡಿಯೂ ಸಹಿಸಿಕೊಂಡು, ಈಗ ಒಪ್ಪಿಗೆ ನೀಡಿರುವ ಈ ಪಕ್ಷದ ನಾಯಕರ ವರ್ತನೆ ಅವರಲ್ಲಿ ನಂಬಿಕೆ ಇಟ್ಟಿದ್ದ ಜನರಿಗೆ ಬಗೆದ ದ್ರೋಹವೇ ಆಗಿದೆ.

ಇದನ್ನೆಲ್ಲ ನೋಡಿದಾಗ ರಾಜ್ಯದಲ್ಲಿ ಕುಟುಂಬ ರಾಜಕಾರಣದ ಅಧ್ವರ್ಯುಗಳೆನಿಸಿದ ದೇವೇಗೌಡರು, ಹಾಸನ ಜಿಲ್ಲೆಯ ತಮ್ಮ ಪಕ್ಷದ ಯಾವ ನಾಯಕರೂ ಜಿಲ್ಲಾ ಮಟ್ಟದ ನಾಯಕರಾಗಲು ಮುಂದೆ ಬರದ ಕಾರಣ ತಮ್ಮ ಮೊಮ್ಮಗ ಪ್ರಜ್ವಲ್‍ರನ್ನೇ ಜಿಲ್ಲಾ ನಾಯಕತ್ವಕ್ಕಾಗಿ ಪೋಷಿಸುವುದಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳಲು ಯಾವುದೇ ಸಂಕೋಚಪಡದೇ ಇರುವುದು ಸಹಜವೇ ಆಗಿದೆ. ಇನ್ನು ಇವರ ಪಕ್ಷವನ್ನಷ್ಟೇ ಅಪ್ಪ-ಮಕ್ಕಳ ಪಕ್ಷವೆಂದು ಕರೆಯಲು ಯಾರಿಗೂ ಕಾರಣಗಳೇ ಇಲ್ಲ.

ADVERTISEMENT

ಇಂದು ತಮ್ಮ ಮಕ್ಕಳನ್ನು ರಾಜಕಾರಣಕ್ಕೆ ತಂದಿರುವ ಮತ್ತು ತರುತ್ತಿರುವ ಬಹುಪಾಲು ನಾಯಕರು ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ನೆಹರೂ-ಇಂದಿರಾ ಗಾಂಧಿಯವರ ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯುತ್ತಾ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದವರೇ! ಆಗ ಬಹುಶಃ ಅವರಿಗೆಲ್ಲ ಕುಟುಂಬಗಳಿರಲಿಲ್ಲ ಅಥವಾ ಇದ್ದರೂ ಮಕ್ಕಳು ಸಣ್ಣವಾಗಿದ್ದವು ಮತ್ತು ಅವರು ಸಹ ಅಧಿಕಾರ ಅನುಭವಿಸಿ ನಿರ್ವಹಿಸಲಾಗದಷ್ಟು ಆಸ್ತಿಪಾಸ್ತಿ ಮಾಡಿಕೊಂಡಿರಲಿಲ್ಲ. ಆದರೆ ಈಗ ಈ ಮಕ್ಕಳು ದೊಡ್ಡವರಾಗಿ ಅಪ್ಪನ ಅಧಿಕಾರ-ಆಸ್ತಿಯನ್ನು ಬೆಳೆಸಿ ಉಳಿಸಿಕೊಳ್ಳುವ ‘ಜವಾಬ್ದಾರಿ’ ಹೊರಬೇಕಾದ ಹಂತ ತಲುಪಿದ್ದಾರೆ!

ಕುಟುಂಬ ರಾಜಕಾರಣಕ್ಕೆ ಎರಡು ಕಾರಣಗಳಿವೆ. ಒಂದು: ಯಾವುದಕ್ಕೂ ಸಲ್ಲದ ಮಕ್ಕಳಿಗೆ ಜೀವನೋಪಾಯದ ದಾರಿ ಕಲ್ಪಿಸುವುದು. ಎರಡು: ಅಪ್ಪ ಅಧಿಕಾರದಲ್ಲಿದ್ದು ‘ಸಂಪಾದಿಸಿದ’ ಸಂಪತ್ತಿಗೆ ಶಾಸಕನೋ, ಮಂತ್ರಿಯೋ ಆಗಿ ಅವಕಾಶವಿರುವಷ್ಟು ಅದಕ್ಕೆ ಶಾಸನಾತ್ಮಕ ರಕ್ಷಣೆ ಒದಗಿಸುವುದು.

ಆದುದರಿಂದ ಇಂದು ನಮ್ಮ ರಾಜಕಾರಣದ ಅವನತಿಗೆ ಹಣ, ಜಾತಿ ಮತ್ತು ಕೋಮುವಾದಿ ಶಕ್ತಿಗಳಷ್ಟೇ ಈ ಊಳಿಗಮಾನ್ಯಶಾಹಿ ಕುಟುಂಬ ರಾಜಕಾರಣವೂ ಕಾರಣವಾಗಿದೆ ಎಂಬುದನ್ನು ನಾವು ಅರಿಯಬೇಕಿದೆ ಮತ್ತು ಕುಟುಂಬ ರಾಜಕಾರಣ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಒಡ್ಡುತ್ತಿರುವ ಅಪಾಯದ ಬಗ್ಗೆಯೂ ಜನಜಾಗೃತಿಯ ಆಂದೋಲನಗಳನ್ನು ರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.