ADVERTISEMENT

ಹಿರಿಯಕ್ಕನ ಚಾಳಿ...

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST

ಕರ್ನಾಟಕದ ರಾಜಕಾರಣಿಗಳು ಸೌಜನ್ಯ- ಸಜ್ಜನಿಕೆಗಳಿಗೆ ಹೆಸರಾಗಿದ್ದರು. ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ದೇವರಾಜ ಅರಸು, ಎಸ್.ಎಂ. ಕೃಷ್ಣ ಅವರಂಥ ನಾಯಕರು ವಿರೋಧ ಪಕ್ಷದವರು ಸಹ ಮೆಚ್ಚುವಂತೆ ಸಜ್ಜನಿಕೆಯಿಂದ ನಡೆದುಕೊಂಡಿದ್ದರು. ಆದರೆ ಈಗ?

‘ನನ್ನ ಮಾನನಷ್ಟ ಮಾಡಿದ್ದಾರೆ’ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೋಟಿಸ್ ಕಳುಹಿಸಿದ್ದು ಸುದ್ದಿಯಾಗಿದೆ (ಪ್ರ.ವಾ., ಮೇ 8).

ಸಿದ್ದರಾಮಯ್ಯ ಅವರು ವಿರೋಧಿಗಳನ್ನು ಏಕವಚನದಲ್ಲಿ ಸಂಬೋಧಿಸುವ ಪರಂಪರೆಯನ್ನು ಪ್ರತಿಷ್ಠೆಯ ಸಂಕೇತವಾಗಿ ಹುಟ್ಟುಹಾಕಿದವರು. ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎಂಬಂತೆ ವಿರೋಧ ಪಕ್ಷದ ನಾಯಕರೂ ಈ ಚಾಳಿಯನ್ನು ಬೆಳೆಸಿಕೊಂಡರು. ಸಿದ್ದರಾಮಯ್ಯ ಅವರು ಮೋದಿಯನ್ನು ‘ನರಹಂತಕ’ ಎಂದು ಜರೆದಿರಲಿಲ್ಲವೇ? ಅದಕ್ಕೆ ಅವರು ಎಷ್ಟುಕೋಟಿ ಹಣದ ಮಾನನಷ್ಟಕ್ಕೆ ನೋಟಿಸ್‍ ಕಳುಹಿಸಬೇಕು? ಯಡಿಯೂರಪ್ಪ ಅವರನ್ನು ‘ಜೈಲಿಗೆ ಹೋಗಿ
ಬಂದವರು’ (ಅದು ಸರಿ) ಎಂದಿಲ್ಲವೇ? ‘ಜೈಲೂರಪ್ಪ’ ಎಂದು ಗೇಲಿ ಮಾಡಿದ್ದಲ್ಲದೆ, ಭ್ರಷ್ಟ ಎಂದು ಟೀಕಿಸಿಲ್ಲವೇ? ಯಾವ ನ್ಯಾಯಾಲಯ ಅವರನ್ನು ‘ಭ್ರಷ್ಟ’ ಎಂದು ಹೇಳಿದೆ? ಇದಕ್ಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗೆ ಯಾವ ನೋಟಿಸ್ ಜಾರಿ ಮಾಡಬೇಕು?

ADVERTISEMENT

ದುಬಾರಿ ವಾಚ್‌ ಕಟ್ಟಿದ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ‘ಹ್ಯೂಬ್ಲೋಟಯ್ಯ’ ಎಂದೋ, ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ಸಿಲುಕಿ ಜಾಮೀನು ಪಡೆ
ದಿರುವ ರಾಹುಲ್‌ ಹಾಗೂ ಸೋನಿಯಾ ಗಾಂಧಿ ಅವರನ್ನು ‘ಬೇಲ್‌ಗಾಂಧಿ’, ‘ಬೇಲಮ್ಮ’ ಎಂದೋ ಕರೆಯುವುದು ಸನ್ನಡತೆ ಆಗುತ್ತದೆಯೇ? ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜಕಾರಣಿಗಳು ಇಂಥ ದ್ವೇಷಾಸೂಯೆಯ ಮಾತುಗಳನ್ನು ಬಿಟ್ಟು, ಸಜ್ಜನಿಕೆಯನ್ನು ಪ್ರದರ್ಶಿಸಿ ‘ಕರ್ನಾಟಕದ ಮಾನ’ಕ್ಕೆ ಎರವಾಗದಂತೆ ನಡೆದುಕೊಳ್ಳಬೇಕು.

ಡಾ.ಎಸ್.ಎನ್. ಶಿವರುದ್ರಸ್ವಾಮಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.