ಜಂಬೂ ದ್ವೀಪ ಎಂಬ ಹೆಸರಿದ್ದ ನಮ್ಮ ದೇಶಕ್ಕೆ ಭರತ ಚಕ್ರವರ್ತಿಯಿಂದಾಗಿ ಭಾರತ ಎಂಬ ಹೆಸರು ಬಂದಿದೆ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಆದರೆ ನಮ್ಮ ಪುರಾಣಗಳಲ್ಲಿ ಮೂರು ಜನ ಭರತರಿದ್ದಾರೆ. ರಾಮನ ತಮ್ಮ ಭರತ. ದುಶ್ಯಂತ-ಶಕುಂತಲೆಯ ಮಗ ಭರತ ಹಾಗೂ ಜೈನ ಪುರಾಣಗಳಲ್ಲಿ ಬರುವ ಬಾಹುಬಲಿಯ ಅಣ್ಣ ಭರತ.
ಈ ಮೂವರೂ ಗಂಡಸರು. ಅವರ ಹೆಸರಿನಂತೆ ಇಟ್ಟ ದೇಶದ ಹೆಸರೂ ಪುಲ್ಲಿಂಗವಾಗುತ್ತದೆ ತಾನೇ. ಈಗ ನಮ್ಮ ದೇಶಕ್ಕೆ ಪುಲ್ಲಿಂಗದ ಹೆಸರು ಇಟ್ಟು ಸೀರೆ ಉಟ್ಟಿರುವ ಮಹಿಳೆಯ ಪ್ರತಿಮೆ ಅಥವಾ ಚಿತ್ರ ತೋರಿಸಿದರೆ, ಭಾರತ ಮಾತೆ ಹೆಣ್ಣು ವೇಷದ ಗಂಡು (ಬೃಹನ್ನಳೆ) ಎಂಬ ಅರ್ಥ ಬರುತ್ತದೆ.
ಹಾಗಾಗಿ ಭಾರತ ಎನ್ನುವ ಬದಲು ‘ಭಾರತಿ’ ಎಂಬ ಹೆಸರಿಟ್ಟಿದ್ದರೆ ಅದು ಸರಿಯಾದ ಸ್ತ್ರೀಲಿಂಗದ ಹೆಸರಾಗಿರುತ್ತಿತ್ತು ಎನ್ನುವ ಕೆಲವರ ಅಭಿಪ್ರಾಯ ತರ್ಕಬದ್ಧವಾಗಿದೆ. ರಾಷ್ಟ್ರಕವಿ ಕುವೆಂಪು ಸಹಿತ ಕನ್ನಡ ಕವಿಗಳು ನಮ್ಮ ದೇಶಕ್ಕೆ ‘ಭಾರತಿ’ ಎಂಬ ಹೆಸರನ್ನೇ ಹೆಚ್ಚಾಗಿ ಉಪಯೋಗಿಸಿದ್ದಾರೆ.
ದೇಶದಲ್ಲಿ ಶೇ 60ರಷ್ಟು ಜನ ಈಗಲೂ ಬಡತನ ರೇಖೆಗಿಂತ ಕೆಳಗಿದ್ದು ಅವರಲ್ಲಿ ಹೆಚ್ಚಿನವರು ಜೀವನದಲ್ಲಿ ಎಂದೂ ಚಿನ್ನ, ವಜ್ರ ಮುಟ್ಟಿಲ್ಲ. ಹಾಗಿರುವಾಗ ಚಿತ್ರದಲ್ಲಿ ಭಾರತ ಮಾತೆಯ ಮೈಮೇಲೆ ಕಿಲೊಗಟ್ಟಲೆ ಚಿನ್ನಾಭರಣ ತೊಡಿಸಿರುವುದು, ಹೆಚ್ಚಿನ ಸಂಖ್ಯೆಯಲ್ಲಿ ಬಡ ಜನರಿರುವ ನಮ್ಮ ದೇಶದ ಪ್ರತೀಕ ಎನಿಸಲಾರದು ಎನ್ನುವವರ ಅಭಿಪ್ರಾಯವೂ ಸರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.