ADVERTISEMENT

ಇನ್ನೊಂದು ಅಪದ್ಧ!

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST

ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಕೈಬಿಡುವ ವಿಷಯದಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ‘ಮುಗ್ಧ ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣ ಎಂಬ ವಾಕ್ಯ ಕಣ್ತಪ್ಪಿನಿಂದ ನಮೂದಾಗಿತ್ತು’ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ (ಪ್ರ.ವಾ., ಜ.28).

ಜೊತೆಗೆ ‘ಅಲ್ಪಸಂಖ್ಯಾತರ’ ಪದವನ್ನು ಬಿಡಲಾಗಿದೆ ಮತ್ತು ಮೊಕದ್ದಮೆ ಹಿಂಪಡೆಯುವ ನಿರ್ಧಾರ ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯ ಆಗಲಿದೆ ಎಂದೂ ಹೇಳಿದ್ದಾರೆ. ಇಲ್ಲಿ ಮರೆಯಬಾರದ ಸಂಗತಿಯೆಂದರೆ, ಆಲ್ಪಸಂಖ್ಯಾತರ ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸುವ ಸಲುವಾಗಿ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವರದಿಯನ್ನು ಕೇಳಿತ್ತು. ಹೀಗೆ ಕೇಳಲು ಹಿನ್ನೆಲೆಯಾಗಿದ್ದು ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿ. ಆದುದರಿಂದ ಡಿಜಿಪಿ  ಕಚೇರಿಯ ನೆನಪೋ
ಲೆಗಳು ‘ಅಲ್ಪಸಂಖ್ಯಾತರಿಗೆ ಸಂಬಂಧಪಟ್ಟವು’ ಎಂಬುದು ಖಚಿತ ಅಲ್ಲವೇ? ಸಾಚಾರ್ ವರದಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಬಯಸಿದ ವಿವರಗಳು ಅಲ್ಪಸಂಖ್ಯಾತರಲ್ಲದವರಿಗೆ ಅನ್ವಯವಾಗುವವೇ? ‘ಕಣ್ತಪ್ಪು’ ಎನ್ನುವುದು ಪೇಚಿನಿಂದ ಬಚಾವಾಗಲು ಸರ್ಕಾರ ನೀಡಿದ ಅಸಮರ್ಥನೀಯ ಸಮರ್ಥನೆ. ಆದ ಪ್ರಮಾದವನ್ನು ಪ್ರಾಂಜಲವಾಗಿ ಒಪ್ಪಿಕೊಂಡು, ಮೊಕದ್ದಮೆಗಳನ್ನು ಹಿಂಪಡೆಯುವ ವಿಷಯವನ್ನು ಎಲ್ಲರಿಗೂ ಅನ್ವಯಿಸುವ ನಿಟ್ಟಿನಲ್ಲೇ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದರೆ ಸರ್ಕಾರದ ಗೌರವಕ್ಕೆ ಕುಂದು ಬರುತ್ತಿರಲಿಲ್ಲ. ಒಂದು ಅಪದ್ಧ ಸಮರ್ಥಿಸಲು ಮತ್ತೊಂದು ಅಪದ್ಧ ಬೇಕಿತ್ತೇ?

ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.