ADVERTISEMENT

ಇವರು ಕರ್ನಾಟಕದಲ್ಲಿಲ್ಲವೇ?

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ- ತಮಿಳುನಾಡಿನ ಮಧ್ಯೆ ಮತ್ತು ಮಹದಾಯಿ ನದಿ ನೀರು ಹಂಚಿಕೆಗಾಗಿ ಕರ್ನಾಟಕ–ಗೋವಾ ನಡುವೆ ವಿವಾದ ಇದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಆಗಿಂದಾಗ್ಗೆ ಈ ವಿವಾದವನ್ನು ಇಟ್ಟುಕೊಂಡು ನಾಟಕವಾಡುವುದನ್ನು ನೋಡುತ್ತಿದ್ದೇವೆ. ಇಲ್ಲಿ ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕೆಂದು ಸಿನಿಮಾ ತಾರೆಯರು, ಸಾಹಿತಿಗಳು, ಬೇರೆ ಬೇರೆ ಸಂಘಟನೆಗಳವರು ಆಗ್ರಹಿಸುತ್ತಾ ಬಂದಿದ್ದಾರೆ. ಕೆಲವೊಮ್ಮೆ ಕಿರಿಕಿರಿಯ ಬಂದ್ ಗಳೂ ನಡೆದಿವೆ. ಇದಕ್ಕೆ ರಾಜಕೀಯದವರ ಕೃಪಾಕಟಾಕ್ಷವೂ ಇದೆ. ಕಾವೇರಿ ನದಿ ನೀರು ಬೆಂಗಳೂರು, ಮೈಸೂರು, ಮಂಡ್ಯದವರಿಗೆ ಮಾತ್ರ ಎಂದೋ; ಮಹದಾಯಿ ನದಿ ನೀರಿನ ವಿವಾದ ಧಾರವಾಡ– ಬೆಳಗಾವಿ ಭಾಗದ ಜನರದೆಂದೋ ನಾವು ಯಾರೂ ಭಾವಿಸದೆ ಹೋರಾಟಕ್ಕಿಳಿದಿದ್ದೇವೆ. ಹೋರಾಟಕ್ಕೆ ಇಳಿಯದೇ ಇರುವವರನ್ನು ಕನ್ನಡ ವಿರೋಧಿಗಳು ಎಂದೇ ಬಿಂಬಿಸಲಾಗುತ್ತಿದೆ!

ಇಲ್ಲಿ ಇರುವುದು ರಾಜ್ಯ-ರಾಜ್ಯಗಳ ನಡುವಿನ ವಿವಾದ. ಅದರ ಬಗ್ಗೆ ರಾಜಕಾರಣಿಗಳಿಗಂತೂ ಎಲ್ಲಿಲ್ಲದ ಆಸಕ್ತಿ. ಆದರೆ ರಾಜ್ಯದ ಒಳಗಿರುವ ಸಾಮಾನ್ಯ ಜನರು ನೀರಿಲ್ಲದೆ ವಿಲ ವಿಲ ಒದ್ದಾಡುತ್ತಿದ್ದರೂ ಇವರದು ಜಾಣಕುರುಡು ಹಾಗೂ ಕಿವುಡು. ಕೆಲವು ವರ್ಷಗಳಿಂದ ಕುಡಿಯುವ ನೀರು ಹಾಗೂ ವ್ಯವಸಾಯಕ್ಕಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಅಹೋರಾತ್ರಿ ಧರಣಿ ನಡೆಸಿದರೂ ನೀರು ಮಾತ್ರ ಬರಲಿಲ್ಲ. ನಾಯಕರಿಂದ ಒಂದು ಸಾಂತ್ವನದ ನುಡಿಯೂ ಬರಲಿಲ್ಲ. ಚುನಾವಣೆಗಳು ಸಮೀಪಿಸಿದಾಗ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲದ ನಾಟಕವಾಡಿ, ಮತ್ತೆ ಮರೆತು ಹೋಗುತ್ತಾರೆ ರಾಜಕಾರಣಿಗಳು.

ಇನ್ನು ಕನ್ನಡಪರ ಹೋರಾಟಗಾರರು, ಸಿನಿಮಾ ಸೆಲೆಬ್ರಿಟಿಗಳು... ಇವರಿಗೆಲ್ಲಾ ಈ ಭಾಗದ ಜನರ ನೆನಪು ಕೂಡಾ ಬರುವುದಿಲ್ಲ. ಮಹದಾಯಿ ನದಿ ನೀರು ಹಂಚಿಕೆ ವಿವಾದ ಹೋರಾಟಕ್ಕೆ ಈ ಭಾಗದ ಜನರ ಬೆಂಬಲ ಕೇಳುವ ಇವರು, ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಕೊಡಿ ಎಂದು ಕರ್ನಾಟಕದಾದ್ಯಂತ ಏಕೆ ಚಳವಳಿ ನಡೆಸುವುದಿಲ್ಲ? ಇಲ್ಲಿಯವರು ಕರ್ನಾಟಕದಲ್ಲಿಲ್ಲವೇ? ಇವರಿಗೆ ಸಹಕರಿಸುವುದರಿಂದ ತಮಗ್ಯಾವ ಪ್ರಚಾರವೂ ಸಿಗಲಾರದು ಎಂಬ ಧೋರಣೆಯೋ? ನಮಗೆ ನೀರು ಕೊಡಲು ಹಿಂದೇಟು ಹಾಕುವ ಜನ ಕರೆಯುವ ಬಂದ್‌ಗಳಿಗೆ ನಾವ್ಯಾಕೆ ಸಹಕರಿಸಬೇಕು? ಈ ಭಾಗದ ರೈತರ ವಿರುದ್ಧ ಬೆಂಗಳೂರಿನಲ್ಲಿ ಪೋಲೀಸರು ದೌರ್ಜನ್ಯ ನಡೆಸಿದಾಗ ಇವರು ಯಾಕೆ ಸಹಾಯಕ್ಕೆ ಬರಲಿಲ್ಲ? ಈಗ ‘ನಾವೆಲ್ಲರೂ ಒಂದು, ನಾವೆಲ್ಲಾ ಕನ್ನಡಿಗರು’ ಎಂದು ಭಾವನೆಗಳ ಜೊತೆ ಆಟ ಆಡುತ್ತಾ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿರುವುದು ಸರಿಯೇ?

ADVERTISEMENT

ಮಂಜುನಾಥ ಸು.ಮ., ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.