ADVERTISEMENT

ಜನಾಭಿಪ್ರಾಯ– ತಪ್ಪೇನು?

ಆರ್.ಕೆ.ದಿವಾಕರ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST

‘ಮಠ ಸ್ವಾಧೀನ ಇಲ್ಲ’ (ಪ್ರ.ವಾ., ಫೆ. 9) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ ಈ ಇಡೀ ಪ್ರಕ್ರಿಯೆ ಮಠಗಳು ಅಥವಾ ಇತರ ಭಾರತೀಯ ಮೂಲದ ಧಾರ್ಮಿಕ ಕೇಂದ್ರಗಳ ‘ಸರ್ಕಾರೀಕರಣ’ದ ಉದ್ದೇಶದ್ದಾಗಿರಲಿಲ್ಲ.

ಸರ್ಕಾರ ಹೊರಡಿಸಿದ್ದ ಅಧಿಸೂಚನೆಯು ಈ ಕುರಿತು ನೇಮಿಸಲಾಗಿದ್ದ ಆಯೋಗ ಕೈಗೊಂಡ ಆರಂಭಿಕ ಕ್ರಮವೇ ಹೊರತು, ಅದು ಸರ್ಕಾರಿ ಆದೇಶವೇ ಆಗಿರಲಿಲ್ಲ. ಹೀಗಿರುವಾಗ ಸರ್ಕಾರ ಗುರುತರ ಅಪಚಾರ ಮಾಡಹೊರಟಿದೆಯೋ ಎಂಬಷ್ಟು ಗಾಬರಿಯಲ್ಲಿ, ಜನಾಭಿಪ್ರಾಯ ಕೋರುವ ಆದೇಶವನ್ನು ರದ್ದುಪಡಿಸುವ ತರಾತುರಿ ಬೇಕಾಗಿತ್ತೇ?

‘ಮಠ-ಮಾನ್ಯಗಳನ್ನೂ, ಮಸೀದಿ-ಇಗರ್ಜಿಗಳನ್ನೂ ಸರ್ಕಾರ ವಹಿಸಿಕೊಳ್ಳುವುದು ಉಚಿತವೇ’ ಎಂಬ ಬಗ್ಗೆ ಅಭಿಪ್ರಾಯ ತಿಳಿಸಲು ಜನರಿಗೆ ಇಲ್ಲೊಂದು ಅವಕಾಶವಿತ್ತು; ಅದನ್ನು ತಪ್ಪಿಸಲಾಯಿತು. ಧರ್ಮಸಂಸ್ಥೆಗಳ ಪಾತ್ರವು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯದಾಗಿದ್ದು, ಈ ಆಯಾಮಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬಿಲ್‌ಕುಲ್ ಕೂಡದು.

ADVERTISEMENT

ಆದರೆ ಚರ್ಚ್‌, ಮಸೀದಿ, ಮಠ-ಮಂದಿರಗಳು ಕಂದಾಚಾರದ ಕೇಂದ್ರಗಳೂ, ಹಣಕಾಸಿನ ಅವ್ಯವಹಾರದ ತಾಣಗಳೂ ಆದಾಗ ಅವುಗಳ ಜುಟ್ಟು ಅಲುಗಾಡಿಸಿ ಕೇಳುವ ಹೊಣೆಗಾರಿಕೆ ಪ್ರಜಾಸತ್ತಾತ್ಮಕ ಸರ್ಕಾರದ ಮೇಲೆ ಅನಿವಾರ್ಯವಾಗಿ ಇದ್ದೇ ತೀರುತ್ತದೆ.

ಮುಖ್ಯಮಂತ್ರಿ ಗಲಿಬಿಲಿ, ಇಂಥ ಧಾರ್ಮಿಕ ಕೇಂದ್ರಗಳನ್ನು ತಡೆಯುವ ನೈತಿಕ ಧೈರ್ಯ ಸರ್ಕಾರಕ್ಕೆ ಇಲ್ಲ ಎನ್ನುವುದನ್ನು ತೋರಿಸುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.