ADVERTISEMENT

ಸಿನಿಮಾ ದೃಶ್ಯದಂತಿರುವ ನಿಜಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 19:31 IST
Last Updated 14 ಜೂನ್ 2021, 19:31 IST

ಊರಿಗೆ ರಸ್ತೆ ಸಂಪರ್ಕ ಇಲ್ಲದ ಕಾರಣ, ಕಾರವಾರ ತಾಲ್ಲೂಕಿನ ಮಚ್ಚಳ್ಳಿ ಎಂಬ ಕುಗ್ರಾಮದ ಒಬ್ಬ ಹೆಣ್ಣುಮಗಳನ್ನು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಆರೋಗ್ಯ ಚಿಕಿತ್ಸೆಗಾಗಿ ಯುವಕರು ಒಂದು ಬೊಂಬಿಗೆ ಪ್ಲಾಸ್ಟಿಕ್ ಕುರ್ಚಿಯನ್ನು ಕಟ್ಟಿ, ಅದರಲ್ಲಿ ಕೂರಿಸಿಕೊಂಡು ಪಲ್ಲಕ್ಕಿ ಹೊರುವ ರೂಪದಲ್ಲಿ ಭಾರ ಹಂಚಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ನೋಡಿ (ಪ್ರ.ವಾ., ಜೂನ್‌ 13) ಆಶ್ಚರ್ಯವಾಯಿತು. ಸುಮಾರು ಏಳು ಕಿಲೊಮೀಟರ್ ದೂರ ಹೊತ್ತುಕೊಂಡು ಹೋಗಿ ಹಿರಿಯ ಮಹಿಳೆಗೆ ಚಿಕಿತ್ಸೆ ಕೊಡಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ.

ಯಾವುದೇ ಪಟ್ಟಣ ಹಾಗೂ ನಗರವನ್ನು ಸಂಪರ್ಕಿಸಲು ಒಂದು ಬೈಕು ಹೋಗುವಷ್ಟು ಕಾಲುದಾರಿ ಆ ಹಳ್ಳಿಗೆ ಇಲ್ಲ ಎನ್ನುವುದನ್ನು ನೆನೆಸಿಕೊಂಡರೆ ನಿಜಕ್ಕೂ ಭಯ ಎನಿಸುತ್ತದೆ. ಇನ್ನು ಆರೋಗ್ಯ ಮತ್ತು ಶಿಕ್ಷಣ ನಿಲುಕದ ಸಂಗತಿಗಳು. ಮೂಲಸೌಕರ್ಯಗಳನ್ನಂತೂ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಕಾಲದಲ್ಲೂ ಇಂತಹ ಹಳ್ಳಿಗಳಿವೆ, ಇಲ್ಲಿ ಜನ
ವಾಸಿಸುತ್ತಾರೆಂದರೆ ನಿಜಕ್ಕೂ ದುಃಖ ಹಾಗೂ ಆಶ್ಚರ್ಯವೆನಿಸುತ್ತದೆ. ಸುಮಾರು 50ರ ದಶಕದ ಯಾವುದೋ ಒಂದು ಸಿನಿಮಾದ ದೃಶ್ಯದಂತೆ ಭಾಸವಾಗುತ್ತದೆ.

ಶತಶತಮಾನಗಳಿಂದಲೂ ನೋವು, ಅವಮಾನವನ್ನು ಅನುಭವಿಸಿದ ಸಮುದಾಯದ ಬದುಕನ್ನು ಕಾವ್ಯ ವಾಗಿಸಿದ, ಇತ್ತೀಚೆಗೆ ನಮ್ಮನ್ನಗಲಿದ, ಬಂಡಾಯದ ಕವಿ ಎಂದೇ ಪ್ರಸಿದ್ಧರಾದ ಡಾ. ಸಿದ್ಧಲಿಂಗಯ್ಯ ಅವರ ಕವಿತೆಯ ಈ ಸಾಲುಗಳು ನೆನಪಾದವು... ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು, ಕಪ್ಪುಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು, ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು...’ ಓದುತ್ತಿದ್ದಂತೆ ಮಚ್ಚಳ್ಳಿ ಜನರ ಅವಸ್ಥೆಯನ್ನು ನೆನೆಸಿ ಕೊಂಡು ಕಣ್ಣುಗಳು ಒದ್ದೆಯಾದವು.

ADVERTISEMENT

-ಡಿ.ರಾಮಣ್ಣ ಅಲ್ಮರ್ಸಿಕೇರಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.