ADVERTISEMENT

ವಾಚಕರ ವಾಣಿ: ಅರಣ್ಯನೀತಿ ಸಾಮೂಹಿಕ ಹಿತ ಕಾಯಲಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 16:36 IST
Last Updated 5 ಜನವರಿ 2021, 16:36 IST

ನೀಲಗಿರಿ, ಅಕೇಶಿಯ ತರಹದ ಪ್ರಭೇದಗಳ ಏಕಸಸ್ಯ ನೆಡುತೋಪಿಗೆ ಆದ್ಯತೆ ನೀಡುವಂಥ ಅರಣ್ಯ ನಿರ್ವಹಣಾ ನೀತಿಯತ್ತ ರಾಜ್ಯ ಸರ್ಕಾರ ಪುನಃ ಹೊರಳುತ್ತಿರುವ ವರ್ತಮಾನ ಆಘಾತಕಾರಿಯಾಗಿದೆ. ನಾಡಿನೆಲ್ಲೆಡೆ ಕಳೆದ ಐದು ದಶಕಗಳಲ್ಲಿ ವ್ಯಾಪಕವಾಗಿ ಬೆಳೆಸಿದ ಏಕಸಸ್ಯ ನೆಡುತೋಪುಗಳು ಹುಟ್ಟುಹಾಕಿದ ವೈಪರೀತ್ಯಗಳನ್ನು ಅನುಭವಿಸುತ್ತಿದ್ದೇವೆ. ನೀಲಗಿರಿ, ಅಕೇಶಿಯ, ಮ್ಯಾಂಜಿಯಂ, ಗಾಳಿಮರ, ಸಿಲ್ವರ್-ಓಕ್ ತರಹದ ಆಸ್ಟ್ರೇಲಿಯಾ ಮೂಲದ ಪ್ರಭೇದಗಳಿರಲಿ, ದಕ್ಷಿಣ ಅಮೆರಿಕದ ರಬ್ಬರ್ ಆಗಲಿ ಅಥವಾ ನಮ್ಮದೇ ಹಿಮಾಲಯದ ಪೈನಸ್ ಮರವಿರಲಿ, ಒಂದೇ ಪ್ರಭೇದದ ವಿಸ್ತಾರವಾದ ನೆಡುತೋಪುಗಳು ಸ್ಥಳೀಯ ಪರಿಸರ ಮತ್ತು ಜನಜೀವನದ ಮೇಲೆ ಎಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಮೇಲ್ಮಣ್ಣಿನ ಸವೆತ, ಮಣ್ಣಿನ ಸಾರದ ನಾಶ, ಅಂತರ್ಜಲ ಕುಸಿತ, ಗಿಡಮೂಲಿಕೆ ಹಾಗೂ ಕೀಟ–ಪಕ್ಷಿಗಳ ವೈವಿಧ್ಯ ನಾಶ, ಹೊಳೆ-ತೊರೆಗಳಂತಹ ಜಲಮೂಲ ಒಣಗುವುದು, ವಾತಾವರಣದ ತಾಪಮಾನದಲ್ಲಿ ಹೆಚ್ಚಳ– ಏನೆಲ್ಲ ಸಮಸ್ಯೆಗಳು!

ಜಲಮೂಲ ಬತ್ತಿ, ಪರಾಗಸ್ಪರ್ಶ ಕಡಿಮೆಯಾಗಿ, ಹೂವು ಒಣಗತೊಡಗಿ- ಕೃಷಿಯ ಇಳುವರಿಯೂ ತಗ್ಗುವುದನ್ನು ರೈತರು ಅನುಭವಿಸುತ್ತಿದ್ದಾರೆ. ಆದರೆ, ಏರುತ್ತಿರುವ ಕಾಡಿನ ಉತ್ಪನ್ನಗಳ ಬೇಡಿಕೆ ಪೂರೈಸುವ ತುರ್ತು ಕೂಡ ಸರ್ಕಾರಕ್ಕಿರುವುದು ನಿಜ. ಹೀಗಾಗಿ, ಸೀಮಿತವಾಗಿ ‘ಉತ್ಪಾದನಾ ಅರಣ್ಯ’ಗಳನ್ನು (Production Forests) ನಿರ್ಮಿಸುವುದು ಅನಿವಾರ್ಯವಾಗಿದೆ. ಅವು ಉಳಿದ ನೈಜ ಅರಣ್ಯದ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಲ್ಲವು. ಆದರೆ, ಅವು ಏಕಪ್ರಭೇದದ ನೆಡುತೋಪೇ ಆಗಬೇಕಿಲ್ಲ. ಹೆಬ್ಬೇವು, ಮಹಾಗೋನಿ, ಚಂದಕಲು, ಕದಂಬ, ಧೂಪ, ಸಾಲುಧೂಪ, ಹೊಳೆಹೊನ್ನೆಯಂಥ ಹತ್ತಾರು ಸ್ಥಳೀಯ ಪ್ರಭೇದಗಳ, ಜನಸಹಭಾಗಿತ್ವದ ಸಾಮಾಜಿಕ ಆರಣ್ಯಗಳಾಗಿ ಅವು ರೂಪುಗೊಳ್ಳಬೇಕು. ಭವಿಷ್ಯದ ಸಾಮೂಹಿಕ ಹಿತ ಕಾಯುವ ಅಂಥ ಸೂಕ್ತ ಅರಣ್ಯನೀತಿ ಕೈಗೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಲಿ. ಅದರ ಆಧಾರದಲ್ಲಿ, ‘ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ’ಗೆ ಸೂಕ್ತ ತಿದ್ದುಪಡಿಯನ್ನೂ ತರಬೇಕಿದೆ.

-ಡಾ. ಕೇಶವ ಎಚ್. ಕೊರ್ಸೆ, ಶಿರಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.