ADVERTISEMENT

ಪ್ರಜಾಪ್ರಭುತ್ವ ವಿರೋಧಿ ಕ್ರಮ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಫೆಬ್ರುವರಿ 2021, 19:31 IST
Last Updated 28 ಫೆಬ್ರುವರಿ 2021, 19:31 IST

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿ.ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಪತನವಾದದ್ದು ದುರದೃಷ್ಟಕರ ಬೆಳವಣಿಗೆ. ಕೆಲವು ಕಾಂಗ್ರೆಸ್ ಶಾಸಕರು ಪೈಪೋಟಿಗೆ ಬಿದ್ದವರ ಹಾಗೆ ರಾಜೀನಾಮೆ ನೀಡಿ ಸರ್ಕಾರವನ್ನು ಪತನದ ಅಂಚಿಗೆ ತಂದರು. ಸದನದಲ್ಲಿ ಮುಖ್ಯಮಂತ್ರಿ ತಮ್ಮ ಬಹುಮತ ಸಾಬೀತುಪಡಿಸಬೇಕೆಂಬ ಅಲ್ಲಿನ ನೂತನ ಲೆಫ್ಟಿನೆಂಟ್ ಗವರ್ನರ್ ಸೂಚನೆ, ಹಿಂದಿನ ಲೆಫ್ಟಿನೆಂಟ್ ಗವರ್ನರ್‌ ಕಿರಣ್ ಬೇಡಿ ಅವರನ್ನು ಪದಚ್ಯುತಿಗೊಳಿಸಿದ್ದು... ಈ ಎಲ್ಲ ನಾಟಕೀಯ ಬೆಳವಣಿಗೆಗಳ ಹಿಂದೆ ಯಾರಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರಿಗೆ ತಿಳಿಯದ ವಿಷಯವೇನಲ್ಲ.

ಕಳೆದ ಒಂದು ವರ್ಷದ ಅವಧಿಯಲ್ಲಿ ಈ ರೀತಿ ಪತನಗೊಳ್ಳುತ್ತಿರುವ ಎರಡನೇ ಸರ್ಕಾರ ಇದಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಕಮಲನಾಥ್ ನೇತೃತ್ವದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಸೇರಿದ 22 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಇಳಿಯಿತು. ಇಂತಹುದೇ ಪ್ರಯತ್ನ ರಾಜಸ್ಥಾನದಲ್ಲಿ ನಡೆಯಿತಾದರೂ ಅದು ಫಲಕಾರಿಯಾಗಲಿಲ್ಲ. ಇತ್ತ ಕರ್ನಾಟಕದಲ್ಲಿ ಕೂಡ ಆಪರೇಷನ್ ಕಮಲದ ಮೂಲಕ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟ ಸರ್ಕಾರವನ್ನು ಉರುಳಿಸಲಾಯಿತು. ಈ ಎಲ್ಲಾ ಬೆಳವಣಿಗೆಗಳ ನಂತರ ಸಂಬಂಧಪಟ್ಟ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿರುವುದು ಕಾಕತಾಳೀಯವೇನಲ್ಲ. ಅದೇನೇ ಇರಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಅನೈತಿಕ ಮಾರ್ಗಗಳ ಮೂಲಕ ಪ್ರಯತ್ನಿಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ದೇಶದಲ್ಲಿ ಹೆಚ್ಚುತ್ತಿರುವ ಇಂತಹ ಪ್ರವೃತ್ತಿಗಳ ಬಗ್ಗೆ ಸುಪ್ರೀಂ ಕೋರ್ಟ್‌ ಗಮನ ಹರಿಸಬೇಕಾಗಿದೆ.

- ಕೆ.ವಿ.ವಾಸು, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.