ADVERTISEMENT

‘ಜೈನೆಡೆ’: ಕುವೆಂಪು ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 19:30 IST
Last Updated 24 ಆಗಸ್ಟ್ 2018, 19:30 IST

‘ಕುವೆಂಪು ಮೂಲ ಜೈನ, ಭೈರಪ್ಪ ವೈದಿಕ ಬ್ರಾಹ್ಮಣರಲ್ಲ’ (ಪ್ರ.ವಾ., ಆ. 24) ಎಂದು ಬಂಜಗೆರೆ ಜಯಪ್ರಕಾಶ್‌ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಪೂರಕವಾಗಿ ಒಂದಿಷ್ಟು ವಿಚಾರಗಳು:

ಕುವೆಂಪು ತಮ್ಮ ಆತ್ಮಕಥನ ‘ನೆನಪಿನ ದೋಣಿ’ಯಲ್ಲಿ ಹೇಳಿರುವಂತೆ, ಅವರ ವಂಶದ ಪೂರ್ವಿಕರು ಜೈನ ಧರ್ಮೀಯರಾಗಿದ್ದರು. ಕುಪ್ಪಳಿಯಲ್ಲಿ ಕುವೆಂಪು ಅವರ ಮನೆಯಲ್ಲಿ ಶುಕ್ರವಾರವೇ ಅಂಗಳಕ್ಕೆಲ್ಲಾ ಸೆಗಣಿ ಬಳಿದು ಸಿದ್ಧಪಡಿಸಿ, ಶನಿವಾರ ಮನೆಯ ಗಂಡಸರು, ಹೆಂಗಸರೆಲ್ಲಾ ಸ್ನಾನ ಮಾಡಿ ಕಡ್ಡಾಯವಾಗಿ ಮಡಿಯುಟ್ಟು ಶನಿವಾರವನ್ನು ಪವಿತ್ರ ದಿನದಂತೆ ಆಚರಿಸುತ್ತಿದ್ದರು. ಆ ದಿನ ಮಾಂಸ ಭಕ್ಷಣೆ, ಮಾಂಸದ ಅಡುಗೆ ಯಾವುದೂ ಇಲ್ಲ. ಮಾಂಸವನ್ನು ಮುಟ್ಟುವಂತೆಯೂ ಇರಲಿಲ್ಲ. ‘ಈ ಆಚರಣೆಯು ಹಿಂದೆ ನಮ್ಮವರೆಲ್ಲಾ ಜೈನರಾಗಿದ್ದುದರ ಅವಶೇಷವೋ ಎನೊ?’ ಎನ್ನುತ್ತಾರೆ ಕುವೆಂಪು.

‘ಈ ಜೈನ ಧರ್ಮದ ಪ್ರಭಾವವಾಗಿಯೋ ಏನೋ ನಂತರವೂ ಮನೆಯ ಅಡುಗೆ ಕೋಣೆಯಲ್ಲಿ ಮಾಂಸ ಬೇಯಿಸುತ್ತಿರಲಿಲ್ಲ. ಅದಕ್ಕಾಗಿ ಹಿತ್ತಲಿನಲ್ಲಿದ್ದ ಒಲೆಯಲ್ಲಿ, ಮಾಂಸದಡುಗೆಗೆ ಮೀಸಲಾದ ಪಾತ್ರೆಗಳಲ್ಲೇ ಬೇಯಿಸಿ ತಿನ್ನುತ್ತಿದ್ದರು. ಅದನ್ನು ಹೊಲಸಿನ ಒಲೆ, ಹೊಲಸಿನ ಪಲ್ಯ, ಹೊಲಸಿನ ಊಟ ಎಂತಲೇ ಕರೆಯುತ್ತಿದ್ದುದು ಜೈನ ಧರ್ಮದ ಆಚರಣೆಯ ಪಳೆಯುಳಿಕೆಯಾಗಿತ್ತು’ ಎಂಬರ್ಥದಲ್ಲಿ ಹೇಳಿದ್ದಾರೆ. ‘ಈ ಶನಿವಾರದ ‘ಜೈನೆಡೆ’ ಕಟ್ಟಳೆಯನ್ನು ಎಲ್ಲರೂ ಪಾಲಿಸಬೇಕಿತ್ತು. ಅಜ್ಜಯ್ಯನ ಕಟ್ಟುನಿಟ್ಟಾದ ಉಪವಾಸದ ಜೊತೆಗೆ, ಶನಿವಾರದ ‘ಜೈನೆಡೆ’ಗಾಗಿ ಪಾಯಸಪರಮಾನ್ನವೋ ಹೆಸರುಕಾಳು ಗಂಜಿಯೋ ಏನಾದರೊಂದು ವಿಶೇಷವಿರುತ್ತಿತ್ತು’ ಎಂದು ಕುವೆಂಪು ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ವಾಸ್ತವವಾಗಿ ಈಗಲೂ ಕೆಲವು ಊರುಗಳಲ್ಲಿ ಈ ಆಚರಣೆ ಇದೆ. ಮಾಂಸವನ್ನು ಬೇಯಿಸಲು ಪ್ರತ್ಯೇಕವಾದ ಒಲೆ, ಪ್ರತ್ಯೇಕವಾದ ಪಾತ್ರೆಗಳಿದ್ದು, ಮಾಂಸದ ಊಟವನ್ನು ಅಡಿಕೆ ಹಾಳೆಗಳನ್ನು ಸಿಗಿದು ಮಾಡಿದ ತೆಳುವಾದ ಎಲೆ
ಗಳಲ್ಲಿ ತಿನ್ನುತ್ತಾರೆ. ಮಾಂಸ ಬೇಯಿಸುವ ಪಾತ್ರೆಗಳನ್ನು ಮನೆಯ ಒಳಗೆ ತರುವುದಿಲ್ಲ. ಇದಕ್ಕೂ ಜೈನ ಧರ್ಮದ ಹಿನ್ನೆಲೆಯಿರಬಹುದೇನೋ!

-ಮೂರ್ತಿ ತಿಮ್ಮನಹಳ್ಳಿ, ಹೊಸಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.