ADVERTISEMENT

ಬ್ಯಾಂಕುಗಳ ದ್ವಂದ್ವ ನೀತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 20:00 IST
Last Updated 28 ಮಾರ್ಚ್ 2019, 20:00 IST

ನರೇಶ್ ಗೋಯಲ್ ಒಡೆತನದ, ನಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಕಂಪನಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ₹1,500 ಕೋಟಿ ನೆರವು ಘೋಷಿಸಿದೆ. ‘ಇಂತಹ ಬೆಂಬಲವನ್ನು ನನಗೇಕೆ ನೀಡಲಿಲ್ಲ’ ಎಂದು ಬ್ಯಾಂಕುಗಳಿಗೆ ₹9,000 ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತಕರಾರು ತೆಗೆದಿದ್ದಾರೆ. ಇದು ಇಬ್ಬರು ಬಂಡವಾಳಿಗರ ನಡುವಿನ ಬಿಕ್ಕಟ್ಟು ಮತ್ತು ಬ್ಯಾಂಕುಗಳ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದೆ.

ದೊಡ್ಡ ಬಂಡವಾಳಿಗರಿಗೆ ಕಂಪನಿ ತೆರೆಯುವುದರಿಂದ ಹಿಡಿದು ಪ್ರತಿ ಹಂತದಲ್ಲೂ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತಾ ಬರುತ್ತವೆ. ಕಂಪನಿ ನಷ್ಟದಲ್ಲಿದ್ದರೆ ತೆರಿಗೆ ರಿಯಾಯಿತಿ ಕೊಡುವುದಲ್ಲದೆ, ನಿರ್ವಹಣೆ ಇಲ್ಲದ ಆಸ್ತಿ (ವಸೂಲಾಗದ ಸಾಲ) ಎಂದು ನೂರಾರು ಕೋಟಿ ರೂಪಾಯಿ ಮನ್ನಾ ಮಾಡುತ್ತವೆ. ಪೈಪೋಟಿ ಎದುರಿಸಲಾಗದೆ ಕಂಪನಿ ಸಂಪೂರ್ಣ ನಷ್ಟಕ್ಕೀಡಾದಾಗ, ಮಾಲೀಕರನ್ನು ಪಕ್ಕಕ್ಕೆ ಸರಿಸಿ ಬ್ಯಾಂಕುಗಳು ಕಂಪನಿಯನ್ನು ವಶಕ್ಕೆ ಪಡೆದು ಪುನಶ್ಚೇತನಗೊಳಿಸಲು ಸಹಕರಿಸುತ್ತವೆ.

ಆದರೆ, ಈ ನೀತಿಯನ್ನು ರೈತರು, ಕಾರ್ಮಿಕರು, ಜನಸಾಮಾನ್ಯರ ವಿಷಯದಲ್ಲಿ ಅನ್ವಯ ಮಾಡುವುದಿಲ್ಲವೇಕೆ? ಮೊದಲನೆಯದಾಗಿ, ಬ್ಯಾಂಕುಗಳು ಇವರಿಗೆ ಸಾಲ ಕೊಡಲು ಮುಂದೆ ಬರುವುದಿಲ್ಲ. ಕೊಟ್ಟರೂ ಅದನ್ನು ದೊಡ್ಡದಾಗಿ ಚಿತ್ರಿಸುತ್ತವೆ. ಸಾಲಕಟ್ಟುವುದು ತಡವಾದರೆ ಮೇಲಿಂದ ಮೇಲೆ ನೋಟಿಸ್‌ ಜಾರಿ ಮಾಡುತ್ತವೆ. ಸಾಲ ಕಟ್ಟದಿದ್ದಾಗ ಆಸ್ತಿ, ಮನೆ ಜಪ್ತಿ ಮಾಡಲಾಗುತ್ತದೆ. ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುವಲ್ಲಿ ಇಂತಹ ಕಾರಣಗಳೂ ಸೇರಿವೆ. ಆದರೆ ಬ್ಯಾಂಕುಗಳಿಂದ ಸಾಲ ಪಡೆದ ಬಂಡವಾಳಿಗರು ದೇಶ ಬಿಟ್ಟು ಓಡಿಹೋಗಿದ್ದಾರೆಯೇ ಹೊರತು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇಲ್ಲ. ಸರ್ಕಾರ ಮತ್ತು ಬ್ಯಾಂಕ್‌ಗಳ ಈ ಇಬ್ಬಗೆ ನೀತಿ ‘ರೈತ ಈ ದೇಶದ ಬೆನ್ನೆಲುಬು’ ಎನ್ನುವ ಮಾತನ್ನು ಅಣಕಿಸುವಂತಿದೆ.

ADVERTISEMENT

ದೇವು ಟಿ. ವಡ್ಡಿಗೆರೆ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.