ADVERTISEMENT

ವಾಚಕರವಾಣಿ: ಬ್ಯಾಂಕ್‌ ಸಾಲ; ನಿಯಮ ಮರೆಯುವುದೇಕೆ?‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 19:30 IST
Last Updated 10 ಜನವರಿ 2022, 19:30 IST

ಬ್ಯಾಂಕ್‌ ಸಾಲವನ್ನು ಮಂಜೂರು ಮಾಡದಿರುವುದಕ್ಕೆ ಗ್ರಾಹಕನೊಬ್ಬ ಬ್ಯಾಂಕಿಗೆ ಬೆಂಕಿ ಹಚ್ಚಿರುವ ಸುದ್ದಿ ವರದಿಯಾಗಿದೆ. ಈ ವರದಿಯ ಸತ್ಯಾಸತ್ಯತೆ ಅಸ್ಪಷ್ಟವಾಗಿದೆ. ಆದರೆ, ಬ್ಯಾಂಕ್‌ ಸಾಲವು ಗ್ರಾಹಕನ ಹಕ್ಕಾಗಿ ಪರಿಣಮಿಸಿರುವ ಇತ್ತೀಚಿನ ದಿನಗಳಲ್ಲಿ ಈ ವರದಿಯನ್ನು ತಳ್ಳಿಹಾಕಲಾಗದು. ಜನರು ಮೇಜು ಕುಟ್ಟಿ, ಧಮಕಿ ಹಾಕಿ ಬ್ಯಾಂಕ್‌ ಸಾಲವನ್ನು ಕೇಳುವ ಮತ್ತು ಹೆಚ್ಚು ಸಾಲವನ್ನು ನೀಡುವಂತೆ ಬ್ಯಾಂಕುಗಳ ಮೇಲೆ ಸರ್ಕಾರ ಒತ್ತಡ ಹಾಕುವ ಪರಿಸ್ಥಿತಿಯಲ್ಲಿ ಬ್ಯಾಂಕುಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ. ಬ್ಯಾಂಕುಗಳು ಸಾಲ ನೀಡುವಾಗ ಸರ್ಕಾರ ನಿಗದಿಪಡಿಸಿದ ಹಲವು ನಿಯಮಾವಳಿಗಳ ಅನ್ವಯ ಸಾಲ ನೀಡುತ್ತವೆ ಎನ್ನುವುದನ್ನು ಮರೆತು ಕೆಲವು ಗ್ರಾಹಕರು ಸಾಲಕ್ಕಾಗಿ ಬ್ಯಾಂಕುಗಳನ್ನು ಒತ್ತಾಯಿಸುವ ಪ್ರಮೇಯಗಳೂ ಇರುತ್ತವೆ. ಜನಾರ್ದನ ಪೂಜಾರಿಯವರ ಸಾಲಮೇಳದ ದಿನಗಳಲ್ಲಿ ಗ್ರಾಹಕರು ಮ್ಯಾನೇಜರ್‌ ಟೇಬಲ್‌ ಮೇಲೆ ರೇಷನ್‌ ಕಾರ್ಡ್‌ ಇರಿಸಿ ಸಾಲ ಕೇಳಿದ ಉದಾಹರಣೆಗಳು ಇವೆ.

ಸಾಲಕ್ಕಾಗಿ ಬ್ಯಾಂಕಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಗ್ರಾಹಕನ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣವೊಡ್ಡಿ ಬ್ಯಾಂಕ್‌ ಅನ್ನೇ ತರಾಟೆಗೆ ತೆಗೆದುಕೊಂಡರೆ ಆಶ್ಚರ್ಯವಿಲ್ಲ. ಬ್ಯಾಂಕ್‌ ಸಾಲ ನೀಡಲಿಲ್ಲವೆಂದು ಬೊಬ್ಬೆ ಹೊಡೆಯುವವರು ಎಂದಾದರೂ ಗ್ರಾಹಕ ಬ್ಯಾಂಕ್‌ ಸಾಲ ಮರುಪಾವತಿಸಿಲ್ಲ ಎಂದು ಚಿಂತಿಸುವರೇ? ಸಾಲ ವಸೂಲಿ ಮಾಡಲಿಲ್ಲವೆಂದು ಸಂಬಂಧಪಟ್ಟ ಸಿಬ್ಬಂದಿಯನ್ನೇ ಶಿಕ್ಷಿಸುತ್ತಾರೆ.

- ರಮಾನಂದ ಶರ್ಮಾ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.