ADVERTISEMENT

ವಾಚಕರ ವಾಣಿ | ಬಸ್ ದುರಂತ: ಸರ್ಕಾರ ಹೊಣೆ ಹೊರಲಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 19:31 IST
Last Updated 20 ಮಾರ್ಚ್ 2022, 19:31 IST

ಪಾವಗಡದ ಬಳಿ ಸಂಭವಿಸಿದ ಖಾಸಗಿ ಬಸ್ ದುರಂತ ವಿಷಾದಕರ. ಇಂತಹ ದುರ್ಘಟನೆಗಳು ಅಲ್ಲಲ್ಲಿ ಸಂಭವಿಸುತ್ತಲೇ ಇರುತ್ತವೆ. ಆದರೂ ಸರ್ಕಾರ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದೆ. ಕೆಲ ವರ್ಷಗಳ ಹಿಂದೆ ನಡೆದ ಮಂಡ್ಯದ ಕನಗನಮರಡಿ ಬಸ್ ದುರಂತವನ್ನು ಜನ ಇನ್ನೂ ಮರೆತಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಹಣದ ಆಸೆಗೆ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಳ್ಳುವುದು, ಗುಜರಿ ಸೇರಬೇಕಾದ ಬಸ್‌ಗಳನ್ನು ರಸ್ತೆಗಿಳಿಸುವುದರ ಜೊತೆಗೆ ಗ್ರಾಮೀಣ ಪ್ರದೇಶದ ಕೆಲವೆಡೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದಿರುವಂತಹ ಕಾರಣಗಳು ಅಪಘಾತಗಳಿಗೆ ಎಡೆ ಮಾಡುತ್ತಿವೆ.

ಕೆಲವು ಖಾಸಗಿ ಬಸ್‌ಗಳು ಅತಿ ವೇಗವಾಗಿ ಸಂಚರಿಸುತ್ತಿವೆ. ಇವೆಲ್ಲವೂ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಣುಮುಚ್ಚಿ ಕೂತಿದ್ದಾರೆ. ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದಿರುವೆಡೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ನಿಗಾ ವಹಿಸಿದರೆ ಇಂತಹ ಎಷ್ಟೋ ಅಪಘಾತಗಳನ್ನು ತಪ್ಪಿಸಬಹುದು. ಅವಶ್ಯಕತೆ ಇರುವೆಡೆ ಸರ್ಕಾರಿ ಬಸ್ಸುಗಳನ್ನು ಓಡಿಸಬೇಕಿದೆ ಹಾಗೂ ಪಾವಗಡ ಅಪಘಾತದ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊರಬೇಕಿದೆ.

-ಶಿವಶಂಕರ ಎಸ್., ಮುತ್ತರಾಯನಹಳ್ಳಿ, ಮಧುಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.