ADVERTISEMENT

ಕೊಲೆ ಮತ್ತು ಜಾತಿ ಮನಃಸ್ಥಿತಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಸೆಪ್ಟೆಂಬರ್ 2020, 15:42 IST
Last Updated 1 ಸೆಪ್ಟೆಂಬರ್ 2020, 15:42 IST

ಸಿಂದಗಿ ತಾಲ್ಲೂಕಿನ ಬೂದಿಹಾಳ ಪಿ.ಎಚ್‌. ಗ್ರಾಮದ ದಲಿತ ಯುವಕ ಅನಿಲ ಇಂಗಳಗಿ, ದೇವಸ್ಥಾನದಲ್ಲಿ ಸವರ್ಣೀಯ ವ್ಯಕ್ತಿಗಳೊಟ್ಟಿಗೆ ಸರಿಸಮನಾಗಿ ಕುಳಿತಿದ್ದಕ್ಕೆ ಕೊಲೆಗೀಡಾಗಿದ್ದಾರೆ ಎಂದು ಮೊದಲಿಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ವೈಯಕ್ತಿಕ ವ್ಯವಹಾರದಲ್ಲಿ ಉಂಟಾದ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂಬರ್ಥದಲ್ಲಿ ನಂತರ ಸುದ್ದಿ ಪ್ರಕಟವಾಯಿತು. ಕೊಲೆಯಾದ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದವರು, ಕೊಲೆ ಮಾಡಿದವರು ಪ್ರಬಲ ಜಾತಿಗೆ ಸೇರಿದವರು ಎಂಬುದು ಇಲ್ಲಿ ಪ್ರಮುಖವಾದ ಅಂಶ. ದಲಿತರ ಮೇಲೆ ನಡೆದ ಯಾವುದೇ ಹಲ್ಲೆ, ಕೊಲೆಯು ಅಂತಿಮವಾಗಿ ಉದ್ದೇಶಗಳನ್ನು ಜಾತಿಯ ಬಗಲಿನಿಂದ ಎಳೆದು ವ್ಯಕ್ತಿಗತ ನೆಲೆಗೆ ಹಾಗೂ ವ್ಯಾವಹಾರಿಕ ಕಾರಣಕ್ಕೆ ಎಂಬಂತೆ ಬಿಂಬಿಸುವ ಪ್ರಯತ್ನಗಳು ಹೊಸವೇನಲ್ಲ.

ದಲಿತರ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಇನ್ನೆಂದೂ ಇಂತಹ ಕೃತ್ಯಗಳು ನಡೆಯಬಾರದು ಎಂಬಷ್ಟರಮಟ್ಟಿಗೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ಅನಿಲ ತಮ್ಮ ಗ್ರಾಮದಲ್ಲಿ ಸಣ್ಣಪುಟ್ಟ ಪಂಚಾಯಿತಿ ಮಾಡಿಕೊಂಡು ನಾಯಕನಾಗುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದವರು. ಕೊಲೆ ಆರೋಪ ಹೊತ್ತವರೊಂದಿಗೆ ಸಣ್ಣಪುಟ್ಟ ವ್ಯಾವಹಾರಿಕ ನಂಟೂ ಇದ್ದಿರಬಹುದು. ಅನಿಲ ತಮಗಿಂತ ಒಂದು ಹೆಜ್ಜೆಮುಂದೆ ಹೋಗಿ ನಾಯಕ ಆಗಿಬಿಟ್ಟರೆ, ಆರ್ಥಿಕವಾಗಿ ಪ್ರಬಲನಾಗಿಬಿಟ್ಟರೆ ಅಥವಾ ತಮ್ಮ ವ್ಯವಹಾರದಲ್ಲಿ ವಿನಮ್ರನಾಗಿ ಇರದೆ ತಮ್ಮನ್ನು ಪ್ರಶ್ನಿಸಿದ್ದನ್ನು ಅರಗಿಸಿಕೊಳ್ಳಲಾರದೆ ಹತ್ಯೆ ಮಾಡಿರಬಹುದು ಎಂಬ ವಿಶ್ಲೇಷಣೆಗಳೂ ವ್ಯಕ್ತವಾಗಿವೆ. ಹಾಗೊಂದು ವೇಳೆ ಆಗಿದ್ದರೂ ಅಂತಿಮವಾಗಿ ಈ ಕೊಲೆಯ ಹಿಂದಿರುವ ಮನಃಸ್ಥಿತಿ ಜಾತಿಯೇ ಆಗಿರುತ್ತದೆ.

ಎನ್.ರವಿಕುಮಾರ್ ಟೆಲೆಕ್ಸ್, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.