ಪ್ರಾತಿನಿಧಿಕ ಚಿತ್ರ
ಜಾತೀಯತೆ ಸಮಾಜಕ್ಕೆ ದೊಡ್ಡ ಪಿಡುಗು
ಇಡೀ ವಿಶ್ವವೇ ಬದಲಾವಣೆಯ ಪಥದಲ್ಲಿ ಸಾಗಿದೆ. ಆದರೆ, ದೇಶದ ಹಳ್ಳಿಗಳಲ್ಲಿ ಇಂದಿಗೂ ಜಾತಿ ಎನ್ನುವ ರೋಗಕ್ಕೆ ಚಿಕಿತ್ಸೆ ನೀಡುವ ಬದಲು ಪೋಷಿಸುತ್ತಿರುವುದು ದುರದೃಷ್ಟಕರ. ಕೆಲವರಲ್ಲಿ ಮನುಷ್ಯರ ಜೀವಕ್ಕಿಂತ ಜಾತಿ ಪ್ರೇಮ ಹೆಚ್ಚಿದಂತೆ ಕಾಣುತ್ತದೆ. ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾದಳೆಂದು ತನ್ನ ಮಗಳನ್ನೇ ಕೊಲ್ಲುವ ಹಂತಕ್ಕೆ ತಂದೆ ಇಳಿಯುವುದು ಸಮಾಜವೇ ತಲೆತಗ್ಗಿಸುವ ಸಂಗತಿ. ದೇಶದಾದ್ಯಂತ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಗಳಿಗೆ ಜಾತಿಪದ್ಧತಿ ಮೂಲ ಕಾರಣ. ಜಾತಿಯ ಮರ್ಯಾದೆ ಉಳಿಸಿಕೊಳ್ಳಲು ಹಲ್ಲೆ, ಕೊಲೆ ನಡೆಯುತ್ತಿರುವುದು ಜನತಂತ್ರದ ಆಶಯಗಳಿಗೆ ವಿರುದ್ಧವಾದುದು. ಇಂತಹ ಹತ್ಯೆಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಬೇಕಾದ ನಾಗರಿಕ ಸಮಾಜ ಮೌನಕ್ಕೆ ಜಾರಿರುವುದು ಆತಂಕಕಾರಿ. ಈ ಬೆಳವಣಿಗೆಯು ಭವಿಷ್ಯದ ಭಾರತದ ಬಗ್ಗೆ ದುಗುಡವನ್ನು ಹೆಚ್ಚಿಸುತ್ತದೆ.
⇒ರಾಜಕುಮಾರ ಎಂ. ದಣ್ಣೂರ, ಅಫಜಲಪೂರ
ಹಸನಾಗದ ಜನಸಾಮಾನ್ಯರ ಬದುಕು
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳೂವರೆ ದಶಕವಾದರೂ ಉದ್ಯೋಗ, ಆಹಾರ, ಶಿಕ್ಷಣ, ಆರೋಗ್ಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ; ಅದಾನಿ–ಅಂಬಾನಿಯಂತಹ ಉದ್ಯಮಿಗಳ ಸಂಪತ್ತಷ್ಟೆ ಏರಿಕೆಯಾಗುತ್ತಿದೆ. ಬಡವರು ಮತ್ತು ಮಧ್ಯಮವರ್ಗದ ಜನರ ಬದುಕು ಮಾತ್ರ ನಿಂತ ನೀರಾಗಿದೆ. ರಾಜಕಾರಣವೆಂದರೆ, ಸರ್ಕಾರ ಅಥವಾ ಮುಖ್ಯಮಂತ್ರಿ ಬದಲಾವಣೆಗೆ ಸೀಮಿತವಾಗಿದೆ. ಜನರ ಕಷ್ಟಕ್ಕೆ ಪರಿಹಾರ ಒದಗಿಸುವ ನೀತಿಗಳು ಅನುಷ್ಠಾನವಾಗುತ್ತಿಲ್ಲ. ರೈತ ವಿರೋಧಿಯಾದ ಭೂಸ್ವಾಧೀನ ನೀತಿಗಳು ರೂಪುಗೊಂಡಿವೆ. ಕಾರ್ಮಿಕ ಕಾಯ್ದೆಗಳು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿವೆ. ಕನಿಷ್ಠ ಕೂಲಿಗಾಗಿ ಜನರು ಹೋರಾಟ ನಡೆಸುವಂತಾಗಿದೆ. ಬಡಜನರ ಬದುಕನ್ನು ಹಸನುಗೊಳಿಸುವ ಕೆಲಸಕ್ಕೆ ಇನ್ನಾದರೂ ಆಳುವ ವರ್ಗ ಮುಂದಾಗಲಿ.
⇒ಎನ್. ಮಹಾರಾಜ, ಹೊಸಪೇಟೆ
ಅಧಿಕಾರ ವಿಕೇಂದ್ರೀಕರಣಕ್ಕೆ ಪೆಟ್ಟು
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಎರಡು–ಮೂರು ತಿಂಗಳಲ್ಲಿ ಸಿದ್ಧತೆ ನಡೆಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಸಜ್ಜಾಗುತ್ತಿರುವುದು ಸಂತೋಷದ ವಿಷಯ. ಆದರೆ, ಇದು ಕೇವಲ ಭರವಸೆಯಾಗಬಾರದು. ಮತ್ತೊಂದೆಡೆ ಈ ತಿಂಗಳ ಅಂತ್ಯದಲ್ಲಿ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿಯೂ ಪೂರ್ಣಗೊಳ್ಳಲಿದೆ. ಹಾಗಾಗಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಸಾಂವಿಧಾನಿಕವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಅಗತ್ಯ. ಚುನಾವಣೆಗೆ ನಿರ್ದಿಷ್ಟ ವೇಳಾಪಟ್ಟಿ ಸಿದ್ಧಪಡಿಸಬೇಕು. ವಿಳಂಬಗೊಂಡರೆ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಪೆಟ್ಟು ಬೀಳಲಿದೆ.
⇒ಶಾನು ಯಲಿಗಾರ, ಯರಗುಪ್ಪಿ
ಹೊಸ ವರ್ಷಾಚರಣೆ: ಸಂಯಮ ಇರಲಿ
ಯುವಜನತೆಗೆ ಹೊಸ ವರ್ಷಾಚರಣೆ ಎಂದರೆ ಮೋಜಿನಾಟ ಎಂಬಂತಾಗಿದೆ. ಕೆಲವರು ಪಟಾಕಿ ಸಿಡಿಸುತ್ತಾ, ಸಂಗೀತ ಗೋಷ್ಠಿಗಳಿಗೆ ಭೇಟಿ ನೀಡುತ್ತಾ ದಿನ ಕಳೆದರೆ; ಇನ್ನೂ ಹಲವರದು ಕುಡಿತ, ಕುಣಿತ... ಇಷ್ಟಕ್ಕೇ ಹೊಸ ವರ್ಷಾಚರಣೆ ಸೀಮಿತವಾಗಿರುತ್ತದೆ. ಸಂಭ್ರಮಾಚರಣೆಯನ್ನು ಒಂದೆರಡು ದಿನಕ್ಕೆ ಸೀಮಿತಗೊಳಿಸ ಬಾರದು. ಹೊಸ ವರ್ಷ ಎಂದರೆ ಕೇವಲ ದಿನಾಂಕದ ಬದಲಾವಣೆ ಅಲ್ಲ, ಅದು ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಿಗುವ ಮತ್ತೊಂದು ಅವಕಾಶ. ವರ್ಷಪೂರ್ತಿ ಆರೋಗ್ಯಕರ ಜೀವನ, ಹಣ ಉಳಿತಾಯ, ಪ್ರಯಾಣದಂತಹ ಹೊಸ ಗುರಿ ರೂಪಿಸಿಕೊಳ್ಳುವುದು ಹೆಚ್ಚು ಸೂಕ್ತ ಅನಿಸುತ್ತದೆ. ಯುವಜನತೆಯು ಶುಭಾಶಯಗಳ ವಿನಿಮಯ, ಮೋಜು-ಮಸ್ತಿಗೆ ಸೀಮಿತವಾಗದೆ ದೊಡ್ಡ ಸಂಕಲ್ಪಗಳ ಸಾಕಾರಕ್ಕೆ ಮುಂದಾಗಬೇಕಿದೆ.
⇒ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಗಣಿತ ಕಲಿಯುವ ಆಸಕ್ತಿ ರೂಢಿಸಿಕೊಳ್ಳಿ
ಶ್ರೀನಿವಾಸ ರಾಮಾನುಜನ್ ಅವರು ಭಾರತ ಕಂಡ ಶ್ರೇಷ್ಠ ಗಣಿತಜ್ಞ. ಇತ್ತೀಚೆಗೆ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಗಣಿತ ದಿನ’ವಾಗಿ ಆಚರಿಸಲಾಯಿತು. ಗಣಿತ ಎಂದರೆ ಕಬ್ಬಿಣದ ಕಡಲೆ; ಬೇಗ ತಲೆಗೆ ಹತ್ತುವುದಿಲ್ಲ ಮುಂತಾದ ನಂಬಿಕೆ ನಮ್ಮಲ್ಲಿ ಬೇರೂರಿದೆ. ಪೋಷಕರು ತಮ್ಮ ಮಕ್ಕಳಲ್ಲಿಯೂ ಇಂತಹ ಭಯ ತುಂಬುತ್ತಾರೆ. ನಮಗಂತೂ ಲೆಕ್ಕ ಹೇಳಿಕೊಡಲು ಬರುವುದಿಲ್ಲ ಎಂದು ಉದ್ಗರಿಸುತ್ತಾರೆ. ಆದರೆ, ಗಣಿತದಷ್ಟು ಆಸಕ್ತಿದಾಯಕ ವಿಷಯ ಬೇರೊಂದಿಲ್ಲ. ಗಣಿತ ಶಿಕ್ಷಕರು ಮಕ್ಕಳಲ್ಲಿ ಈ ವಿಷಯ ಕುರಿತು ಒಲವು ಮೂಡಿಸಬೇಕು. ಭಯ ಹೋಗಲಾಡಿಸಿ ಅರಿವು ಮೂಡಿಸುವುದರಿಂದ ಗಣಿತದ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಪ್ರೀತಿ ಬೆಳೆಯುತ್ತದೆ. ಪ್ರೀತಿಯಿಂದ ಕಲಿತ ಯಾವುದೇ ವಿಷಯವೂ ಮಕ್ಕಳಿಗೆ ಹೊರೆಯಾಗಲಾರದು.
⇒ಆಶಾ ಅಪ್ರಮೇಯ, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.