ADVERTISEMENT

ಬಾಲ್ಯ ಅನುಭವಿಸುವ ಹಕ್ಕು ಇವರಿಗೆಲ್ಲಿದೆ?

​ಪ್ರಜಾವಾಣಿ ವಾರ್ತೆ
Published 17 ಮೇ 2019, 16:36 IST
Last Updated 17 ಮೇ 2019, 16:36 IST

ಇತ್ತೀಚೆಗೆ ಒಂದು ಮದುವೆಗೆ ಹೋಗಿದ್ದೆವು. ಊಟಕ್ಕೆ ಬಫೆ ವ್ಯವಸ್ಥೆ ಇತ್ತು. ಸರದಿಯಲ್ಲಿ ಪ್ಲೇಟು ಹಿಡಿದು ನಿಂತು, ಬಡಿಸುತ್ತಿದ್ದವರನ್ನು ಗಮನಿಸಿದೆ. ಒಂದೇ ರೀತಿಯ ಸೀರೆ, ರವಿಕೆ ತೊಟ್ಟ ಹೆಂಗಸರು ಚಕಚಕನೆ ಬಡಿಸುತ್ತಿದ್ದರು. ಸ್ವಲ್ಪ ಗಿಡ್ಡ, ಗಿಡ್ಡ ಹೆಂಗಸರೇ ಹೆಚ್ಚಾಗಿದ್ದಾರಲ್ಲಾ ಎನಿಸಿತು. ಸೂಕ್ಷ್ಮವಾಗಿ ಗಮನಿಸಿದಾಗ ಆಘಾತವಾಯಿತು. ಒಬ್ಬ ದೊಡ್ಡ ಹೆಣ್ಣು ಮಗಳನ್ನು ಬಿಟ್ಟರೆ, ಉಳಿದವರೆಲ್ಲಾ ಹತ್ತು, ಹನ್ನೆರಡು ವರ್ಷದ ಬಾಲಕಿಯರು. ಆಟ-ಪಾಠದಲ್ಲಿ ತೊಡಗಿರಬೇಕಾಗಿದ್ದ ಬಾಲೆಯರು, ಹೆಂಗಸರಂತೆ ಸೀರೆ ಉಟ್ಟು, ಊಟ ಬಡಿಸುತ್ತಿದ್ದುದನ್ನು ಕಂಡು ಮನಸ್ಸಿಗೆ ನೋವಾಯಿತು.

ಮನಸ್ಸು ತಡೆಯಲಾರದೆ ‘ಎಷ್ಟನೇ ತರಗತಿ ಓದುತ್ತಿದ್ದೀರಿ’ ಎಂದು ವಿಚಾರಿಸಿದೆ. ‘ನಾಲ್ಕು’, ‘ಐದು’ ಎಂಬ ಉತ್ತರ ಬಂತು. ‘ಇಷ್ಟು ಚಿಕ್ಕ ವಯಸ್ಸಿನಲ್ಲಿ ಕೆಲಸಕ್ಕೆ ಯಾಕೆ ಕರೆದುಕೊಂಡು ಬಂದಿದ್ದೀರಿ? ಬಾಲಕಾರ್ಮಿಕ ಪದ್ಧತಿ ತಪ್ಪು ಎಂದು ಗೊತ್ತು ತಾನೇ?’ ಎಂದು ಹಿರಿಯ ಹೆಂಗಸನ್ನು ವಿಚಾರಿಸಿದೆ. ‘ಕೈ ಮುಗೀತೀನಕ್ಕಾ, ಯಾರಿಗೂ ಹೇಳಬೇಡಿ. ಏನ್ ಮಾಡೋಣ, ನಾಲ್ಕು ಕೈಗಳು ಹೆಚ್ಚಾದರೆ ನಾವೂ ನಾಲ್ಕು ಕಾಸು ಹೆಚ್ಚು ಸಂಪಾದಿಸಬಹುದು. ಮದುವೆ ಸೀಸನ್ನಿನಲ್ಲಿ ಮಾತ್ರ ಕರೆತರುತ್ತೇವೆ. ಉಳಿದ ದಿನಗಳಲ್ಲಿ ಶಾಲೆಗೆ ಹೋಗುತ್ತಾರೆ’ ಎಂದಾಗ ನಂಬುವುದೋ ಬಿಡುವುದೋ ಗೊತ್ತಾಗಲಿಲ್ಲ.

ಊಟ ಮಾಡಿ ಕೈತೊಳೆಯಲು ಹೋದಾಗ, ಅಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದವರು ಇವರಿಗಿಂತ ಚಿಕ್ಕ ಹೆಣ್ಣು ಮಕ್ಕಳು. ಅಂದರೆ ಆರರಿಂದ, ಎಂಟು ವರ್ಷದವರಿರಬೇಕು. ಮತ್ತೊಬ್ಬ ಹಿರಿಯ ಹೆಂಗಸಿನ ಜೊತೆ ಅವರೆಲ್ಲ ಕೈಜೋಡಿಸಿದ್ದರು. ಕಡಿಮೆ ಕೂಲಿಗೆ ಹೆಚ್ಚು ದುಡಿಮೆ ತೆಗೆದುಕೊಳ್ಳಬಹುದು ಎಂಬ ಗುತ್ತಿಗೆದಾರನ ಮನಃಸ್ಥಿತಿಯೋ, ಮಕ್ಕಳನ್ನು ದುಡಿಮೆಗೆ ಹಚ್ಚಿದರೆ ಮನೆ ಪರಿಸ್ಥಿತಿ ಸ್ವಲ್ಪ ಸುಧಾರಿಸೀತು ಎಂಬ ತರ್ಕದಲ್ಲಿರುವ ಅವರ ಪೋಷಕರ ದುಃಸ್ಥಿತಿಯೋ ಅಂತೂ ಬಾಲ್ಯದ ಸವಿ ಸವಿಯಬೇಕಾದ ಸಮಯದಲ್ಲಿ, ದುಡಿಯಬೇಕಾದ ಆ ಮಕ್ಕಳ ಹಣೆಬರಹ ಕಂಡು ಮನ ಮಿಡಿಯಿತು.

ADVERTISEMENT

- ನಳಿನಿ ಟಿ. ಭೀಮಪ್ಪ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.