ADVERTISEMENT

ಟ್ಯಾಬ್ಲೆಟ್‌ ಯೋಜನೆ: ಪಾರದರ್ಶಕತೆ ಕಾಯಲಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 19:30 IST
Last Updated 18 ಡಿಸೆಂಬರ್ 2020, 19:30 IST

ರಾಜ್ಯದ 1.55 ಲಕ್ಷ ವಿದ್ಯಾರ್ಥಿಗಳಿಗೆ ₹ 155.40 ಕೋಟಿ ವೆಚ್ಚದಲ್ಲಿ ತಲಾ ₹ 10 ಸಾವಿರ ಬೆಲೆಯ ಟ್ಯಾಬ್ಲೆಟ್ (ಪರ್ಸನಲ್‌ ಮೊಬೈಲ್‌ ಕಂಪ್ಯೂಟರ್‌) ಅನ್ನು ಉಚಿತವಾಗಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ (ಪ್ರ.ವಾ., ಡಿ. 18). ಇದೊಂದು ಅತ್ಯುತ್ತಮ ಯೋಜನೆ, ನಿಜ. ಆದರೆ ಒಳ್ಳೆಯ ಕಂಪನಿಯ ಒಂದು ಟ್ಯಾಬ್ಲೆಟ್‌ನ ಬೆಲೆ ಮಾರುಕಟ್ಟೆಯಲ್ಲಿ ಈಗ ಐದು ಸಾವಿರದಿಂದ ಆರು ಸಾವಿರ ರೂಪಾಯಿ ಆಸುಪಾಸಿನಲ್ಲಿ ಇದೆ. ಸರ್ಕಾರ ಒಂದು ಟ್ಯಾಬ್ಲೆಟ್ ಅನ್ನು ಹತ್ತು ಸಾವಿರ ರೂಪಾಯಿ ಬೆಲೆಯಲ್ಲಿ ಖರೀದಿ ಮಾಡಲು ಹೊರಟಿದೆ ಎಂದು ವರದಿಯಾಗಿದೆ. ಒಟ್ಟಿಗೆ ಸಾವಿರಾರು ಟ್ಲಾಬ್ಲೆಟ್‌ಗಳನ್ನು ಖರೀದಿಸುವಾಗ ಬೆಲೆ ಕಡಿಮೆ ಆಗಬೇಕು, ಅಲ್ಲವೇ?

ಇತ್ತೀಚೆಗೆ ರೋಟರಿ ಕ್ಲಬ್ ಮತ್ತು ನ್ಯೂಸ್ ಚಾನೆಲ್ಲೊಂದರ ಸಹಯೋಗದಲ್ಲಿ ದಾನಿಗಳಿಂದ ಹಣ ಸಂಗ್ರಹಿಸಿ ತಲಾ ₹ 3,495ರ ಬೆಲೆಯಲ್ಲಿ ಖರೀದಿಸಿದ ಟ್ಯಾಬ್ಲೆಟ್‌ಗಳನ್ನು ಈಗಾಗಲೇ ರಾಜ್ಯದ ಹತ್ತನೇ ತರಗತಿ ಮಕ್ಕಳಿಗೆ ಹಂಚಲಾಗುತ್ತಿದೆ. ನಾನು ನಾಲ್ಕು ವರ್ಷಗಳ ಹಿಂದೆ ನನ್ನ ಮಗನಿಗೆ ಏಳು ಸಾವಿರ ರೂಪಾಯಿ ಬೆಲೆಯಲ್ಲಿ ಕೊಡಿಸಿದ್ದ ಪ್ರತಿಷ್ಠಿತ ಕಂಪನಿಯ ಟ್ಯಾಬ್ಲೆಟ್ ಈಗಲೂ ಚೆನ್ನಾಗಿ ಕೆಲಸ ಮಾಡುತ್ತಿದೆ. ಈಗ ಖರ್ಚು ಮಾಡಲು ಹೊರಟಿರುವ ಹಣದಲ್ಲಿ ಸುಮಾರು ಮೂರು ಲಕ್ಷ ಮಕ್ಕಳಿಗೆ ಟ್ಯಾಬ್ಲೆಟ್ ಕೊಡಬಹುದು. ಸರ್ಕಾರ ಇಂತಹ ಯೋಜನೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು ಜನಮೆಚ್ಚುಗೆ ಗಳಿಸಲಿ.

-ವಿ.ತಿಪ್ಪೇಸ್ವಾಮಿ, ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.